ಬಗರ್ ಹುಕುಂ ಭೂಮಿ ಮಂಜೂರಾತಿ ಅವ್ಯವಹಾರವನ್ನು ಸಿಒಡಿ ತನಿಖೆಗೆಗೊಪ್ಪಿಸುವಂತೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Session--00011

ಬೆಂಗಳೂರು, ಜು.4-ಬಗರ್‍ಹುಕುಂ ಸಾಗವಳಿ ಭೂಮಿಯ ಮಂಜೂರಾತಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಸಿಒಡಿ ತನಿಖೆಗೆ ಒಪ್ಪಿಸುವಂತೆ ಶಾಸಕರು ವಿಧಾನಸಭೆಯಲ್ಲಿಂದು ಆಗ್ರಹಿಸಿದರು.  ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಬಿಜೆಪಿಯ ಶಾಸಕ ಕುಮಾರ್‍ಬಂಗಾರಪ್ಪ ಅವರು, ಬಗರ್‍ಹುಕುಂ ಸಾಗುವಳಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಗಮನ ಸೆಳೆದರು.

1991ರಲ್ಲಿ ಬಗರ್‍ಹುಕುಂ ಸಾಗುವಳಿಗೆ ಅರ್ಜಿ ಸ್ವೀಕರಿಸಲಾಗಿದೆ. ಆ ವೇಳೆ ಸುಮಾರು 6 ಲಕ್ಷ ಹೆಕ್ಟೇರ್ ಭೂಮಿಯನ್ನು ಸಕ್ರಮ ಮಾಡಿಕೊಡಲಾಗಿದೆ. ಅನಂತರ ಬಹಳಷ್ಟು ಅಕ್ರಮಗಳು ನಡೆದಿವೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆರೆ, ಸ್ಮಶಾನ, ಅರಣ್ಯ ಪ್ರದೇಶಗಳನ್ನು ಸಕ್ರಮ ಮಾಡಿಕೊಳ್ಳಲಾಗುತ್ತಿದೆ. ನಿಜವಾದ ಫಲಾನುಭವಿಗಳನ್ನು ವಂಚಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಶಾಸಕರಾದ ಮಾಧುಸ್ವಾಮಿ, ಅಗರ ಜ್ಞಾನೇಂದ್ರ, ಗೂಳಿಹಟ್ಟಿ ಶೇಖರ್ ಮತ್ತಿತರರು, ಕುಮಾರ್‍ಬಂಗಾರಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸದನದಲ್ಲಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಈ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನಿಜವಾದ ಫಲಾನುಭವಿಗಳಾದ ಎಸ್ಸಿ-ಎಸ್ಟಿ, ಒಬಿಸಿಗೆ ಭೂಮಿ ಸಿಕ್ಕಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳ ಬೆಂಬಲಿಗರು ಭೂಮಿ ಲಪಟಾಯಿಸಿದ್ದಾರೆ. ಈ ಬಗ್ಗೆ ಸಿಒಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. 1986ರಲ್ಲಿ ಬಗರುಹುಕುಂ ಸಾಗುವಳಿಗೆ ಅರ್ಜಿ ಆಹ್ವಾನಿಸಲಾಯಿತು. ಅದೇ ವರ್ಷ ಹುಟ್ಟಿದವರಿಗೆ ಸಾಗುವಳಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಂಜೂರು ಮಾಡಿಕೊಡಲಾಗಿದೆ. ಒಂದೇ ಕುಟುಂಬದ ಐದಾರು ಮಂದಿಗೆ ತಲಾ ಐದು ಎಕರೆಯಂತೆ ಭೂಮಿ ಮಂಜೂರಾಗಿದೆ ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿಯ ಶಾಸಕರು ಬೆಂಬಲ ವ್ಯಕ್ತಪಡಿಸಿದರೆ, ಜೆಡಿಎಸ್‍ನ ಶಾಸಕರಾದ ಬಾಲಕೃಷ್ಣ, ಶಿವಲಿಂಗೇಗೌಡ ಮತ್ತಿತರರು ವಿರೋಧ ವ್ಯಕ್ತಪಡಿಸಿದರು.

ನಾವು ಬಗರ್‍ಹುಕುಂ ಸಮಿತಿಗಳಿಗೆ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಅರ್ಹ ಫಲಾನುಭವಿಗಳಿಗೆ ಭೂ ಮಂಜೂರಾಗಿದೆ. ಫಾರಂ ನಂ.53 ಇಲ್ಲದೆ ಒಂದು ಅಡಿ ಜಾಗವನ್ನು ನಿಯಮ ಬಾಹಿರಾವಾಗಿ ಮಂಜೂರು ಮಾಡಲು ಸಾಧ್ಯವಿಲ್ಲ. ಆರೋಪ ಮಾಡುತ್ತಿರುವ ಶಾಸಕರ ಕ್ಷೇತ್ರಗಳಲ್ಲಿ ಏನು ನಡೆದಿದೆ ಎಂಬುದು ನಮಗೆ ಗೊತ್ತಿಲ್ಲ. ತನಿಖೆ ಬೇಕಾದರೆ ಆಯಾ ಕ್ಷೇತ್ರಗಳಿಗೆ ಸೀಮಿತವಾಗಿ ಮಾಡಿ ಎಂದು ಒತ್ತಾಯಿಸಿದರು.

ಇದಕ್ಕೆ ಸುದೀರ್ಘ ವಿವರಣೆ ನೀಡಿದ ಕುಮಾರ್‍ಬಂಗಾರಪ್ಪ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ 21 ಸಾವಿರ ಬಗರ್‍ಹುಕುಂ ಅರ್ಜಿಗಳಿವೆ. 3668 ಪ್ರಕರಣಗಳಲ್ಲಿ ಅಕ್ರಮವಾಗಿ ಮಂಜೂರಾತಿಯಾಗಿದೆ. ಭದ್ರಾವತಿ ಕಾಗದ ಕಾರ್ಖಾನೆಯ ಫ್ಲಾಟೆಂಷನ್ ಜಾಗ, ಸೊರಬದ ಸಂತೆ ಜಾಗ, ಸ್ಮಶಾನ, ಕೆರೆ ಎಲ್ಲವನ್ನೂ ಮಂಜೂರಾತಿ ಮಾಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ದೂರಿದರು. ಹತ್ತು ದಿನಗಳ ಹಿಂದೆ ಶಿವಮೊಗ್ಗಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಅಕ್ರಮದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಆದರೆ ಈವರೆಗೂ ತನಿಖೆ ಯಾರು ಮಾಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಎಲ್ಲಾ ಅಕ್ರಮಗಳು ಜಿಲ್ಲಾಧಿಕಾರಿಯವರ ಮೂಲಕವೇ ನಡೆದಿದೆ. ಅವರನ್ನೇ ತನಿಖಾಧಿಕಾರಿಯನ್ನಾಗಿ ಮಾಡಿದರೆ ಸರಿ ಹೋಗುವುದಿಲ್ಲ. ಸಿಒಡಿ ತನಿಖೆಯಾಗಬೇಕು. ಸರ್ಕಾರ ಕೂಡಲೇ ಸಿಒಡಿ ತನಿಖೆ ನಡೆಸಲಿ. ಬಗರ್‍ಹುಕುಂ ಸಾಗುವಳಿ ಸಮಿತಿ ರಚಿಸಲಿ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವರು ಈಗಾಗಲೇ ತನಿಖೆಯ ಭರವಸೆ ನೀಡಿದ್ದಾರೆ. ಇನ್ನಷ್ಟು ಪ್ರಕರಣಗಳ ಬಗ್ಗೆ ದಾಖಲೆ ಇದ್ದರೆ ಕೊಡಿ. ಯಾವ ಸ್ವರೂಪದ ತನಿಖೆ ಎಂಬುದನ್ನು ತನಿಖೆ ಮಾಡಿ ನಿರ್ಧಾರ ಮಾಡುತ್ತೇವೆ. ನಿಮ್ಮ ಅಭಿಪ್ರಾಯಗಳನ್ನು ಸಚಿವರ ಗಮನಕ್ಕೆ ತರುತ್ತೇನೆ ಎಂದರು.

Facebook Comments

Sri Raghav

Admin