ವಿಧಾನಪರಿಷತ್‍ನಲ್ಲಿ ಮಾತಿನ ಚಕಮಕಿಗೆ ಕಾರಣವಾದ ಲೆಹರ್ ಸಿಂಗ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Lehar-SIng--01
ಬೆಂಗಳೂರು, ಜು.4- ಸಮಾಜವನ್ನು ಒಡೆದಿದ್ದ ಮಾಜಿ ಮುಖ್ಯಮಂತ್ರಿಯನ್ನು ಸೋಲಿಸುವ ಮೂಲಕ ಸಚಿವ ಜಿ.ಟಿ.ದೇವೇಗೌಡ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಬಿಜೆಪಿಯ ಸದಸ್ಯ ಲೆಹರ್ ಸಿಂಗ್ ಆರೋಪ ಮಾಡಿದ್ದು, ವಿಧಾನಪರಿಷತ್‍ನಲ್ಲಿ ಕೆಲಕಾಲ ಆಡಳಿತ ಮತ್ತು ವಿರೋಧ ಪಕ್ಷ ಸದಸ್ಯರ ಮಾತಿನ ಚಕಮಕಿಗೆ ಕಾರಣವಾಯಿತು.

ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭಿಸಿದ ಲೆಹರ್ ಸಿಂಗ್, ಸಿದ್ದರಾಮಯ್ಯ ಹೆಸರು ಹೇಳದೆ ಮಾಜವನ್ನು ಒಡೆಯಲು ಮುಮದಾಗಿದ್ದ ಮಾಜಿ ಮುಖ್ಯಮಂತ್ರಿಯನ್ನು ಜಿಟಿಡಿ ಸೋಲಿಸಿದರು. ಇದಕ್ಕಾಗಿ ಅವರಿಗೆ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ಸದಸ್ಯರನ್ನು ಕೆಣಕಿದರು.
ಲೆಹರ್ ಸಿಂಗ್ ಆರೋಪಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಚಿವ ಕೆ.ಜೆ.ಜಾರ್ಜ್ ಸಿದ್ಧರಾಮಯ್ಯನವರು 5 ವರ್ಷ ಕಾಲ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಎಲ್ಲ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯ ಬಗ್ಗೆ ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚುನಾವಣೆಯಲ್ಲಿ ಸೋತಿದ್ದರು. ಆಗ ಅವರ ಮಾರ್ಯದೆ ಕಡಿಮೆಯಾಯಿತೇ ಎಂದು ಪ್ರಶ್ನಿಸಿದರು.

ನಾನು ಯಾರನ್ನು ಗುರಿಯಾಗಿಟ್ಟುಕೊಂಡು ಆರೋಪ ಮಾಡುತ್ತಿಲ್ಲ. ಮಾಜಿ ಪ್ರಧಾನಿಗಳಾದ ದೇವೇಗೌಡರು ಮಾಡಿರುವ ಭಾಷಣವನ್ನೇ ಪ್ರಸ್ತಾಪಿಸುತ್ತಿದ್ದೇನೆ. ದೇವೇಗೌಡರು ಸದನದಲ್ಲಿ ಇಲ್ಲದಿರಬಹುದು. ಆದರೆ ಇಲ್ಲಿ ಮತ್ತೊಬ್ಬ ಗೌಡರು (ಜಿಟಿಡಿ) ಇದ್ದಾರೆ. ಹಾಗಾಗಿ ಹೇಳುತ್ತಿದ್ದೇನೆ. ಯಾರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವ ದುರದ್ದೇಶವಿಲ್ಲ ಎಂದರು.

ಇದರಿಂದ ಇನ್ನಷ್ಟು ಕೆರಳಿದ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ಭಾಷಣದ ಮೇಲೆ ಭಾಷಣವನ್ನು ಮಾಡುವ ಬದಲು ಲೆಹರ್ ಸಿಂಗ್ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.
ಮಾತು ಮುದುವರೆಸಿದ ಲೆಹರ್ ಸಿಂಗ್, ಜೆಡಿಎಸ್ ಕಾಂಗ್ರೆಸ್‍ನ ಬೆಂಬಲ ಕೇಳದಿದ್ದರೂ ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ಸೇ ಬೆಂಬಲ ಕೊಟ್ಟಿದೆ. ಈಗ ಕೆಲವರು ಮುಖ್ಯಮಂತ್ರಿ ಕುಮಾರಸ್ವಾಮಿ ಒಂದೇ ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳುತ್ತಿದ್ದಾರೆ. ನಾವು ಈ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಅಸ್ಥಿರವಾದರೆ ನಿಮ್ಮಿಂದಲೇ ಎಂದು ಕಾಂಗ್ರೆಸ್‍ನವರತ್ತ ಬೊಟ್ಟು ಮಾಡಿದರು.

ಈ ಹಂತದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸದಸ್ಯರಾದ ಎಚ್.ಎಂ.ರೇವಣ್ಣ, ಐವಾನ್ ಡಿಸೋಜ, ನಾರಾಯಣಸ್ವಾಮಿ, ಪ್ರಸನ್ನಕುಮಾರ್ ಸೇರಿದಂತೆ ಮತ್ತಿತರ ಸದಸ್ಯರು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡದೇ ನೀವು ರಾಜಕೀಯ ಭಾಷಣ ಮಾಡುತ್ತೀದ್ದೀರಿ, ಸಮಾಜ ಒಡೆಯುವುದು ಯಾರೆಂಬುದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ.

ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಒಬ್ಬರ ವಿರುದ್ದ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಮುಗಿಬಿದ್ದರು. ಈ ವೇಳೆ ಸಭಾಪತಿ ಬಸವರಾಜ್ ಹೊರಟ್ಟಿ, ನೀವು ರಾಜ್ಯಪಾಲರ ಭಾಷಣದ ಮೇಲಷ್ಟೇ ಮಾತನಾಡಬೇಕು. ಇಲ್ಲಿ ರಾಜಕೀಯ ಭಾಷಣ ಮಾಡಲು ಅವಕಾಶವಿಲ್ಲ. ಪದೇ ಪದೇ ರಾಜಕೀಯವನ್ನೇ ಮಾತನಾಡುವುದರಿಂದ ಕಲಾಪ ಹಾಳಾಗುತ್ತದೆ. ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಆಗ ಸಚಿವ ಕೃಷ್ಣೇಭೈರೇಗೌಡ ಅವರು, ನಾವು ಕಲಾಪವನ್ನು ಸದನದ ನಿಯಮದ ಪ್ರಕಾರವೇ ನಡೆಸಬೇಕು.ಕೆಲವು ಸಂದರ್ಭಗಳಲ್ಲಿ ಸದಸ್ಯರಿಗೆ ಮಾತನಾಡಲಿ ಎಂಬ ಕಾರಣಕ್ಕಾಗಿ ಸ್ವಲ್ಪ ನಿಯಮಾವಳಿಗಳನ್ನು ಸಡಿಲ ಮಾಡಲಾಗುತ್ತದೆ. ಎಲ್ಲದಕ್ಕೂ ನಿಯಮಾವಳಿಯನ್ನೇ ಅಳವಡಿಸಲು ಆಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಕಾನೂನು ಬಿಟ್ಟು ಹೋಗಲು ಸಾಧ್ಯವಿಲ್ಲ. ಸದಸ್ಯರು ತಮ್ಮ ತಮ್ಮ ಇತಿಮಿತಿಗಳನ್ನು ಅರಿತು ಮಾತನಾಡಬೇಕು ಎಂದು ಸಲಹೆ ಮಾಡಿದರು.

Facebook Comments

Sri Raghav

Admin