ಥಿಯೇಟರ್’ಗಳಲ್ಲಿ ‘6ನೇ ಮೈಲಿ’ಯ ಥ್ರಿಲ್ಲಿಂಗ್ ರೈಡು ಶುರು

ಈ ಸುದ್ದಿಯನ್ನು ಶೇರ್ ಮಾಡಿ

6ne-Maili

ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಹಾರರ್- ಥ್ರಿಲ್ಲರ್ ಚಿತ್ರಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗಿ ತೆರೆ ಕಾಣುತ್ತಿವೆ. ಅದೇರೀತಿ 6ನೇ ಮೈಲಿ ಎಂಬ ಮತ್ತೊಂದು ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಸೀನಿ (ಶ್ರೀನಿವಾಸ್) ಆ್ಯಕ್ಷನ್-ಕಟ್ ಹೇಳಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಾಣುತ್ತಿದೆ.

6ne-Maili-1

ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಟ್ರಕ್ಕಿಂಗ್‍ಗೆ ಬರುವ ಅನೇಕ ಟೆಕ್ಕಿಗಳು ಕಣ್ಮರೆಯಾಗುತ್ತಿದ್ದರು, ಹಾಗೆ ಟ್ರಕ್ಕಿಂಗ್‍ಗೆಂದು ಹೋದಂಥವರು ಎಲ್ಲಿ ಕಾಣೆಯಾದರು, ಹೇಗೆ ಮರೆಯಾದರು ಎಂಬುದನ್ನು ಬೆನ್ನಟ್ಟಿ ಹೋದಾಗ ಅನೇಕ ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತವೆ. ಅದು ಏನು, ಏಕಾಯಿತು ಎಂಬುದನ್ನು ಹೇಳುವ ಕಥೆಯೇ 6ನೇ ಮೈಲಿ.  ಈ ಚಿತ್ರದಲ್ಲಿ ಇಬ್ಬರು ರೇಡಿಯೋ ಜಾಕಿಗಳು ನಟಿಸಿರುವುದು ವಿಶೇಷ. ಆರ್.ಜೆ.ನೇತ್ರಾ ಹಾಗೂ ಆರ್.ಜೆ. ಸುದೇಶ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಕ್ರೈಮ್, ಥ್ರಿಲ್ಲರ್ ಕಥಾನಕವಾಗಿದ್ದು, ಚಿತ್ರಕ್ಕೆ ಬೆಂಗಳೂರು ಅಲ್ಲದೆ ವೆಸ್ಟರ್ನ್ ಘಾಟ್ಸ್, ಸಿರ್ಸಿ, ಯಲ್ಲಾಪುರದಲ್ಲಿ ಕೂಡ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರವನ್ನು ದಾವಣಗೆರೆ ಮೂಲದ ಡಾ. ಜಿ.ಎಸ್. ಶೈಲೇಶ್‍ಕುಮಾರ್ ಅವರು ಮೊದಲ ಬಾರಿಗೆ ನಿರ್ಮಿಸಿದ್ದಾರೆ. ಮೊದಲಿನಿಂದಲೂ ಚಿತ್ರರಂಗದ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ಶೈಲೇಶ್‍ಕುಮಾರ್ ಅವರು ಈ ಹುಡುಗರು ಬಂದು ಕಥೆ ಹೇಳಿದಾಗ ಒಪ್ಪಿ ಸಿನಿಮಾ ಮಾಡಲು ಮುಂದಾದರಂತೆ.

ಸಾಯಿಕಿರಣ್ ಈ ಚಿತ್ರದ ಸಂಗೀತ ನಿರ್ದೇಶಕರು. ಇದು ಥ್ರಿಲ್ಲರ್ ಕಥೆಯಾದ್ದರಿಂದ ಹಿನ್ನೆಲೆ ಸಂಗೀತ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಯಂತೆ. ಪರಮೇಶ್ ಈ ಚಿತ್ರದ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಯುವ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಈ ವಿಭಿನ್ನ ಪ್ರಯತ್ನದಲ್ಲಿ ಬಹಳಷ್ಟು ನಿರೀಕ್ಷೆಗಳೊಂದಿಗೆ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ. ಇನ್ನೇನಿದ್ದರೂ ಈ 6ನೇ ಮೈಲಿ ಚಿತ್ರವನ್ನು ಸಿನಿ ಪ್ರಿಯರು ಯಾವ ರೀತಿ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin