ಕುಮಾರಣ್ಣನ ಬಜೆಟ್’ಗೆ ದೋಸ್ತಿ ಶಾಸಕರಿಂದಲೇ ತೀವ್ರ ಅಸಮಾಧಾನ..!

ಈ ಸುದ್ದಿಯನ್ನು ಶೇರ್ ಮಾಡಿ

Congress-on--Kumaraswamy

ಬೆಂಗಳೂರು,ಜು.5-ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್‍ಗೆ ಆಡಳಿತ ಪಕ್ಷದಲ್ಲಿ ತೀವ್ರ ಅಸಮಾಧಾನವುಂಟಾಗಿದೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಯು.ಟಿ.ಖಾದರ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲೇ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕರಾವಳಿ ಭಾಗಕ್ಕೆ ಬಜೆಟ್‍ನಲ್ಲಿ ಒಂದೇ ಒಂದು ಕಾರ್ಯಕ್ರಮಗಳನ್ನು ಘೋಷಣೆ ಮಾಡದೆ ಇರುವುದಕ್ಕೆ ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಇಲಾಖೆಗೆ ಕಳೆದ ಬಾರಿಯಷ್ಟೇ ಅನುದಾನ ಒದಗಿಸಿದ್ದೀರಿ. ನಾನು ಹೇಗೆ ಇಲಾಖೆಯನ್ನು ಮುನ್ನಡೆಸಬೇಕು, ಒಂದೇ ಒಂದು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲ. ಜನತೆಗೆ ಏನು ಉತ್ತರ ನೀಡಲಿ ಎಂದು ಮುಖ್ಯಮಂತ್ರಿ ಬಳಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.  ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಇದರಿಂದ ಸಾಧ್ಯವಾಗವುದಿಲ್ಲ. ನನ್ನ ಇಲಾಖೆಗೆ ನ್ಯಾಯ ಸಿಗದಿದ್ದರೆ ಸಚಿವನಾಗಿದ್ದಕ್ಕೆ ಅರ್ಥವಿದೆಯೇ ಎಂದು ನೋವು ಹೊರಹಾಕಿದ್ದಾರೆ.

ಇನ್ನು ಆಹಾರ ಮತ್ತು ನಾಗರಿಕೆ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಕೂಡ ತಮ್ಮ ಇಲಾಖೆಗೆ ಹೆಚ್ಚು ಅನುದಾನ ನೀಡದಿರುವುದಕ್ಕೆ ಮುನಿಸಿಕೊಂಡಿದ್ದಾರೆ. ಬಜೆಟ್ ಮಂಡನೆಯಾದ ತಕ್ಷಣವೇ ನೇರವಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಜಮೀರ್, ಹಿಂದಿನ ಸಿದ್ದರಾಮಯ್ಯ ಸರ್ಕಾರ ಎಷ್ಟು ನಿಗದಿ ಮಾಡಿತ್ತೋ ಅಷ್ಟೇ ಹಣವನ್ನು ನೀವು ನಿಗದಿಪಡಿಸಿದ್ದೀರಿ.ನನ್ನ ಇಲಾಖೆಗೆ ಹೆಚ್ಚಿನ ಹಣವನ್ನು ಸಿಗಬಹುದೆಂಬ ನಿರೀಕ್ಷೆಯಿತ್ತು.  ಅಲ್ಲದೆ ನಾನು ಈ ಬಾರಿ ಇಲಾಖೆಯಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ತೀರ್ಮಾನಿಸಿದ್ದೆ. ಆದರೆ ಬಜೆಟ್‍ನಲ್ಲಿ ಒಂದೇ ಒಂದು ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲ. ಇದರಿಂದ ನನಗೆ ಅಸಮಾಧಾನವಾಗಿದೆ ಎಂದು ಅಳಲು ತೋಡಿಕೊಂಡರು.

ಎಚ್.ಕೆ.ಪಾಟೀಲ್ ಅಸಮಾಧಾನ:
ಕಾಂಗ್ರೆಸ್‍ನ ಹಿರಿಯ ನಾಯಕ ಮಾಜಿ ಸಚಿವ ಎಚ್.ಕೆ.ಪಾಟೀಲ್ ಕೂಡ ಇಂದಿನ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಣಕಾಸು ಖಾತೆಯನ್ನು ಹೊಂದಿರುವ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಅವರು ನಮ್ಮ ಭಾಗಕ್ಕೆ ಒಂದೇ ಒಂದು ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ. ಈ ಬಜೆಟ್‍ನಿಂದ ಲೋಕಸಭೆ ಚುನಾವಣೆಯಲ್ಲಿ ನಾವು ಪಕ್ಷವನ್ನು ಮುನ್ನೆಡೆಸಲು ಸಾಧ್ಯವೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿರುವುದಾಗಿ ತಿಳಿದುಬಂದಿದೆ.

Facebook Comments

Sri Raghav

Admin