ಕೆಂಗೇರಿಯಲ್ಲಿ ಪಾಲಿಕೆ ಸಂಕೀರ್ಣ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ಈ ಸುದ್ದಿಯನ್ನು ಶೇರ್ ಮಾಡಿ

imran-pasha-bbmp

ಬೆಂಗಳೂರು, ಜು.5- ಕೆಂಗೇರಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಚೇರಿಗಳು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳ ತರಬೇತಿ ಕೇಂದ್ರಗಳನ್ನೊಳಗೊಂಡ ಪಾಲಿಕೆ ಸಂಕೀರ್ಣವನ್ನು ನಿರ್ಮಿಸಲು ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಸದಸ್ಯರು ತಪಾಸಣೆ ನಡೆಸಿದರು.

ಈ ಸಂದರ್ಭದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಪಾಲಿಕೆ ಸಂಕೀರ್ಣ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ಅವರು ಕೂಡಲೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಮಳೆ ಅನಾಹುತ ತಡೆಗಟ್ಟಲು ನಿರ್ಮಿಸಲಾಗಿರುವ ತಾತ್ಕಾಲಿಕ ಕಂಟ್ರೋಲ್ ರೂಂಅನ್ನು ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಳೆಗಾಲದಲ್ಲಿ ಯಾವುದೇ ದೂರುಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಹಾಗೂ ವಿಭಾಗದ ಕಚೇರಿಯಲ್ಲಿ ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ದೂರು ನಿರ್ವಹಣಾ ರಿಜಿಸ್ಟ್ರಾರ್ ತೆರೆಯಲು ಅಧಿಕಾರಿಗಳಿಗೆ ಪಾಷ ಸೂಚನೆ ನೀಡಿದರು. 135 ಲಕ್ಷ ರೂ. ವೆಚ್ಚದಲ್ಲಿ ಎಸ್‍ಎಫ್‍ಸಿ ಅನುದಾನದಲ್ಲಿ ಕೆಂಗೇರಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಶಾಲೆ ಕಟ್ಟಡ ಮತ್ತು ಬಸ್ ನಿಲ್ದಾಣ ನಿರ್ಮಾಣ ಪ್ರದೇಶಗಳಿಗೂ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.  ತಪಾಸಣೆ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ದೀಪಾ ನಾಗೇಶ್, ಶ್ವೇತಾ ವಿಜಯ್‍ಕುಮಾರ್, ಹೇಮಲತಾ ಸತೀಶ್, ಯಶೋಧಾ ಲಕ್ಷ್ಮಿಕಾಂತ್, ಭುವನೇಶ್ವರಿ, ಸುಜಾತಾ, ಡಿ.ಸಿ.ರಮೇಶ್, ಮಂಜುಳಾ ಮತ್ತಿತರರು ಹಾಜರಿದ್ದರು.

Facebook Comments