ತೆರೆಯ ಮೇಲೆ ‘ತಿಮ್ಮನ ಪರಸಂಗ’ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

parasanga
ಚಂದನವನದಲ್ಲಿ ಈ ವಾರ ಹಳ್ಳಿ ಸೊಗಡಿನ ಸುಂದರ ಕಥಾಹಂದರ ಬಿಡುಗಡೆಗೊಳ್ಳುತ್ತಿದೆ. ಈ ಹಿಂದೆ ತರ್ಲೆ ವಿಲೇಜ್ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕೆ.ಎಂ.ರಘು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಮತ್ತೊಂದು ಚಿತ್ರ ಪರಸಂಗ. ರಾಗ ಖ್ಯಾತಿಯ ನಟ ಮಿತ್ರ ಹಾಗೂ ಅಕ್ಷತಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ  ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡುವ ಮೂಲಕ ಬಿಡುಗಡೆಗೊಳ್ಳುತ್ತಿದೆ.

ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹರ್ಷವರ್ಧನರಾಜ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಜಯ್‍ಕುಮಾರ್ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ.  ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕೆ.ಎಂ.ರಘು, ಹಾಸನದ ಬಳಿಯ ಹಳ್ಳಿಯೊಂದರಲ್ಲಿ ನಡೆದಂಥ ನೈಜ ಘಟನೆಯನ್ನು ಆಧರಿಸಿ  ಈ ಚಿತ್ರವನ್ನು ಮಾಡಿದ್ದೇವೆ. ಪಕ್ಕಾ  ಹಳ್ಳಿ ಬ್ಯಾಕ್ ಡ್ರಾಪ್‍ನಲ್ಲಿ ನಡೆಯುವ ಕಥೆಯಿದು.

parasanga-1

ನಂಬಿಕೆ ಎನ್ನುವುದು ಮನುಷ್ಯನಿಗೆ ಎಷ್ಟುಮುಖ್ಯವೋ ಅದಕ್ಕೆ ಧಕ್ಕೆಯಾದಾಗ ಏನೆಲ್ಲ ನಡೆಯುತ್ತದೆ ಹಾಗೂ ಸಣ್ಣಪುಟ್ಟ ತಪ್ಪಿನಿಂದಾಗಿ ದೊಡ್ಡಮಟ್ಟದ ಬಿರುಕು ಬಿಟ್ಟಾಗ ಏನಾಗುತ್ತದೆ ಎನ್ನುವುದು ಈ ಚಿತ್ರದ ಕಥಾಹಂದರ.  ಚಿತ್ರದಲ್ಲಿ ನಾಯಕ ತಿಮ್ಮನ ಪಾತ್ರವನ್ನು ಮಿತ್ರ ಅವರು ಮಾಡಿದ್ದಾರೆ. ಅವರು ಈವರೆಗೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯ ಪಾತ್ರ ಮೂರು ಶೇಡ್‍ನಲ್ಲಿ ಬರುತ್ತದೆ. ಅಕ್ಷತಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.  ನಿರ್ದೇಶಕ ತರುಣ್‍ಸುಧೀರ್ ಅವರು  ಚಿಕ್ಕ ಪಾತ್ರದಲ್ಲಿ ಕಾಣಿಸಿದ್ದಾರೆ. ಮನರಂಜನೆಯ ಜತೆಗೆ ಮನಕಲುಕುವ ಕಥೆಯೊಂದನ್ನು ಚಿತ್ರದಲ್ಲಿ ಹೇಳಿದ್ದೇವೆ ಎಂದು ಹೇಳುತ್ತ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ನೈಜ ಘಟನೆ ಅನುಭವಿಸಿದ ವ್ಯಕ್ತಿಯನ್ನು ಕೂಡ ತೆರೆ ಮೇಲೆ ತೋರಿಸಲಿದ್ದೇವೆ ಎಂದರು.

ನಾಯಕ ಮಿತ್ರ ಮಾತನಾಡಿ, ಇಂಥ ಟೈಟಲ್ ಇರುವ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದಾಗಲೇ ನಾನು ಅದೃಷ್ಟವಂತನಾದೆ.  ತುಂಬಾ ಮುಗ್ಧತೆ ಇರುವಂಥ ಪಾತ್ರ. ಯಾವುದೇ ಕಲ್ಮಶ ಇರದಂಥ ವ್ಯಕ್ತಿ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ನಗ್ತಾ ನಗ್ತಾನೇ ಆಳ್ತಾರೆ ಎಂದು ಹೇಳಿದರು. ಇನ್ನು ನಾಯಕಿ ಅಕ್ಷತಾ ಕನ್ನಡದವರಾದರೂ ಪರಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಇವರಿಗೆ ಒಂದು ಉತ್ತಮ ಬ್ರೇಕ್ ನೀಡಲಿದೆ ಎಂಬ ಭರವಸೆಯನ್ನು ಹೊಂದಿದ್ದಾರೆ. ಕಾರಣ, ಮೂರು ಶೇಡ್‍ಗಳಲ್ಲಿ ಪಾತ್ರವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ ಎಂದರು. ಇನ್ನುಳಿದಂತೆ ಮನೋಜ್, ಚಂದ್ರಪ್ಪ, ಗೋವಿಂದೇಗೌಡ ಸೇರಿದಂತೆ ಕಲಾವಿದರ ದಂಡೇ ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರವನ್ನು ಎಚ್.ಕುಮಾರ್, ಲೋಕೇಶ್ ಹಾಗೂ ಮಹದೇವೇಗೌಡ ಸೇರಿ ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ವಿತರಕ ದೀಪಕ್ ಮೂಲಕ ಪರಸಂಗನನ್ನು ಕರೆತರುತ್ತಿದ್ದಾರೆ.

Facebook Comments

Sri Raghav

Admin