ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್’ಗೆ 10 ವರ್ಷ ಜೈಲು ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

Nawaz-Sharif

ಇಸ್ಲಾಮಾಬಾದ್. ಜು. 06 : ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ಗೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.  ಇದಲ್ಲದೆ, ಅವರ ಮಗಳು ಮೇರಿಯಮ್ ಗೆ 7 ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ. ನ್ಯಾಯಾಲಯವು ನವಾಜ್ ಷರೀಫ್ಗೆ 73 ಕೋಟಿ ರೂ. ದಂಡ ವಿಧಿಸಿದೆ. ಅದೇ ಸಮಯದಲ್ಲಿ, ನವಾಜ್ ಮಗಳಿಗೆ ದಂಡವನ್ನು 18 ಕೋಟಿ ದಂಡ ವಿಧಿಸಲಾಗಿದೆ. ನವಾಜ್ ಅವರ ಪುತ್ರಿ ಮೇರಿ ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಜುಲೈ 25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಕೆಲವು ದಿನಗಳು ಬಾಕಿ ಇರುವಾಗಲೇ ಪಾಕಿಸ್ತಾನದಲ್ಲಿ ಈ ತೀರ್ಪನ್ನು ಪ್ರಕಟಿಸಲಾಗಿದೆ.

ನ್ಯಾಯಾಲಯದ ಈ ನಿರ್ಧಾರವು ಪಾಕಿಸ್ತಾನದ ರಾಜಕೀಯ ಹೋರಾಟದ ಮೇಲೆ ಪರಿಣಾಮ ಬೀರುವುದು ಸ್ಪಷ್ಟವಾಗಿದೆ.ವಿದೇಶಗಳಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ , ಪುತ್ರಿ ಮರ್ಯಮ್ ಹಾಗೂ ಅಳಿಯ ಕ್ಯಾ. ಸಫ್ದಾರ್ ವಿರುದ್ಧ ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್ಎಬಿ) ನ್ಯಾಯಾಲಯ ಗುರುವಾರ ದೋಷಾರೋಪ ಮಾಡಿತ್ತು.

ಈಗ ಅವೆನ್ ಫೀಲ್ಡ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಹಿನ್ನಲೆಯಲ್ಲಿ ನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ನವಾಜ್ ಗೆ 7 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ನವಾಜ್ ಷರೀಫ್ ಅವರ ಅಳಿಯ ಸಫ್ದಾರ್ ಗೆ 1 ವರ್ಷ ಶಿಕ್ಷೆ ನೀಡಿ ಕೋರ್ಟ್ -1 ನ್ಯಾಯ್ಸಧೀಶ ಮೊಹಮ್ಮದ್ ಬಷೀರ್ ಅವರು ಆದೇಶ ಹೊರಡಿಸಿದ್ದಾರೆ. ಅಕೌಂಟೆಬಿಲಿಟಿ ಕೋರ್ಟ್ನಲ್ಲಿ ಷರೀಫ್ ಮತ್ತು ಅವರ ಮೂವರು ಮಕ್ಕಳ ವಿರುದ್ಧದ ನಾಲ್ಕು ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿವೆ.

ಕಳೆದ ವರ್ಷ ಜುಲೈನಲ್ಲಿ ಭ್ರಷ್ಟಾಚಾರ ಬಯಲುಗೊಂಡು ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದ ನಂತರ, 68 ವರ್ಷದ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಪ್ರಕರಣಗಳು ಆರಂಭಗೊಂಡವು. ಕಳೆದ ವರ್ಷ ನವಾಜ್ ಶರೀಫ್ ಪ್ರಧಾನಮಂತ್ರಿ ಹುದ್ದೆಯಲ್ಲಿರುವಾಗ ನವಾಜ್ ಷರೀಫ್ ಅವರು ಅಕ್ರಮ ಸಂಪಾದನೆ ಮತ್ತು ತೆರಿಗೆ ವಂಚನೆಯಿಂದ ಗಳಿಸಿದ ಕಪ್ಪು ಹಣವನ್ನು ಅಂತರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಹಾಗೂ ವಿದೇಶಗಳಲ್ಲಿ ಹೂಡಿಕೆ ಮಾಡಿದವರ ಪಟ್ಟಿಯನ್ನು ಪನಾಮ ಪೇಪರ್ಸ್ ಲೀಕ್ ಮಾಡಿತ್ತು. ಲಂಡನ್ ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್ ಗಳನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಹಾಗೂ ಪುತ್ರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಲಂಡನ್ನಿನ ಅವೆನ್ ಫೀಲ್ಡ್ ಪ್ರಾಪರ್ಟೀಸ್ ನಲ್ಲಿ ನಕಲಿ ದಾಖಲೆ ನೀಡಿ ಆಸ್ತಿ ಹೊಂದಿರುವ ಕಾರಣಕ್ಕೆ ನವಾಜ್ ಷರೀಫ್ ಕುಟುಂಬದ ಮೇಲೆ 2006ರಿಂದ ತನಿಖೆ ನಡೆದಿದೆ. ಪನಾಮಾ ಪೇಪರ್ಸ್ ನಲ್ಲಿ ಹೆಸರು ಕಾಣಿಸಿಕೊಂಡ ಬಳಿಕ ಮತ್ತೆ ಮೂರು ಪ್ರಕರಣದಲ್ಲಿ ಕೂಡಾ ಆರೋಪಿಯನ್ನಾಗಿಸಲಾಗಿದೆ.

ಪನಾಮಾ ಪೇಪರ್ಸ್ ಹಗರಣ ಅಂದರೆ ಏನು,?

ಮೊಸಾಕ್ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆ. ಅದು ಬಹಿರಂಗ ಪಡಿಸಿದ್ದು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳು. ಅವೇ ಪನಾಮ ಪೇಪರ್ಸ್. ಈ ಎಲ್ಲ ದಾಖಲೆಗಳನ್ನು ಅಪರಿಚಿತ ಮೂಲಗಳಿಂದ ಜರ್ಮನ್ ನ ಪತ್ರಿಕೆಯೊಂದು ಪಡೆಯಿತು. ಆ ನಂತರ ಅಂತರರಾಷ್ಟ್ರೀಯ ಮಟ್ಟದ ತನಿಖಾ ಪತ್ರಕರ್ತರ ಒಕ್ಕೂಟದ ಜತೆಗೆ ಹಂಚಿಕೊಂಡಿತು. ಆ ಒಕ್ಕೂಟವು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಜತೆಗೆ ಮಾಹಿತಿಯನ್ನು ಹಂಚಿಕೊಂಡಿತು. ಅಂದಹಾಗೆ ಆ ದಾಖಲೆಗಳಲ್ಲಿ ಏನಿದ್ದವು ಎಂಬುದು ಪ್ರಶ್ನೆ.

ವಿದೇಶಗಳಲ್ಲಿರುವ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹೇಗೆ ಹಣ ಹೂಡಿಕೆ ಮಾಡಿದ್ದಾರೆ, ಯಾರ್ಯಾರು ಮಾಡಿದ್ದಾರೆ ಎಂಬೆಲ್ಲ ಮಾಹಿತಿ ಅದರಲ್ಲಿತ್ತು. ನೂರಾ ನಲವತ್ಮೂರು ರಾಜಕಾರಣಿಗಳು, ಅದರಲ್ಲಿ ಹನ್ನೆರಡು ರಾಷ್ಟ್ರೀಯ ನಾಯಕರ ಹೆಸರು ಒಳಗೊಂಡಿದ್ದವು. ಅವರ ಕುಟುಂಬದವರು, ನಿಕಟವರ್ತಿಗಳು ಜಗತ್ತಿನಾದ್ಯಂತ ಇರುವ
ತೆರಿಗೆ ಸ್ವರ್ಗ ಎನಿಸಿದ ದೇಶಗಳನ್ನು ಹೇಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ವಿವರಗಳಿದ್ದವು.

ಗಣ್ಯರ ಹೆಸರುಗಳು :

ಪಾಕ್ ಪ್ರಧಾನಿ ನವಾಜ್ ಷರೀಫ್, ಇರಾಕ್ ನ ಮಾಜಿ ಉಪರಾಷ್ಟ್ರಪತಿ ಅಯಾದ್ ಅಲ್ಲವಿ, ಉಕ್ರೇನ್ ನ ರಾಷ್ಟ್ರಪತಿ ಪೆಟ್ರೋ ಪೊರೊಶೆಂಕೋ, ಈಜಿಪ್ಟ್ ನ ಮಾಜಿ ರಾಷ್ಟ್ರಪತಿಯ ಮಗ ಅಲಾ ಮುಬಾರಕ್, ಐಸ್ ಲ್ಯಾಂಡ್ ನ ಪ್ರಧಾನಿಯ ಹೆಸರು ಕೇಳಿಬಂದು, ಇವರೆಲ್ಲ ವಿದೇಶದಲ್ಲಿನ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹಣ ಹೂಡಿರುವುದಾಗಿ ಮಾಹಿತಿ ಹೊರ ಹಾಕಲಾಗಿತ್ತು.

ಪನಾಮ ಪೇಪರ್ ಹೊರ ಹಾಕಿರುವ ಮಾಹಿತಿ ಆಧಾರವನ್ನು ಇಟ್ಟುಕೊಂಡು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ಷರೀಫ್ ವಿರುದ್ಧ ಕೇಸ್ ದಾಖಲಿಸಿದ್ದರು. ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಷರೀಫ್ ಹಾಗೂ ಭ್ರಷ್ಟಾಚಾರದ ಪ್ರಕರಣದ ಕುರಿತು ಜಂಟಿ ತನಿಖಾ ತಂಡ(ಜೆಐಟಿ) ತನಿಖೆ ನಡೆಸುವಂತೆ ಆದೇಶಿಸಿತ್ತು. ಷರೀಫ್ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಜೆಐಟಿ ವರದಿ ನೀಡಿತ್ತು. ಆದರೆ ಷರೀಫ್ ಅವರು ನನ್ನ ಮೇಲಿರುವ ಆರೋಪಗಳು ಎಲ್ಲ ಸುಳ್ಳು, ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂದು ವಾದಿಸಿದ್ದರು.

ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದು `ಪನಾಮ ಪೇಪರ್’ ಹೆಸರಿನಲ್ಲಿ ದಾಖಲೆಗಳನ್ನು 2015ರ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿತ್ತು. ಪನಾಮ ಮೂಲದ ಕಾನೂನು ಸೇವಾ ಕಂಪನಿ ಮೊಸ್ಸಾಕ್ ಫೋನ್ಸೆಕಾದಿಂದ ಗುಪ್ತವಾಗಿ ಪಡೆದಿದ್ದ ಮಾಹಿತಿಗಳನ್ನು ಐಸಿಐಜೆ ಬಿಡುಗಡೆ ಮಾಡಿತ್ತು. ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ವಿವಿಧ ಕಡೆ ಹಣವನ್ನು ಸಂಗ್ರಹಿಸಿದ್ದ ಮಾಹಿತಿ ಈ ವರದಿಯಲ್ಲಿತ್ತು. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿತ್ತು.

Facebook Comments

Sri Raghav

Admin