“ಮಳೆಯಿಂದ ನೊಂದ ಕೊಡಗಿ ಜನರ ಕಣ್ಣೀರು ಒರೆಸಿ, ಪರಿಹಾರ ನೀಡಿ”

ಈ ಸುದ್ದಿಯನ್ನು ಶೇರ್ ಮಾಡಿ

K.G.-Bopaiah
ಬೆಂಗಳೂರು, ಜು.6- ಕೊಡಗಿನಲ್ಲಿ ಅತಿಯಾದ ಮಳೆಯಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಿ ಜನರ ಕಣ್ಣೀರು ಒರೆಸುವ ವಿಶೇಷ ಕಾಳಜಿ ವಹಿಸಬೇಕೆಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಸಿದರು.  ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವ ಕುರಿತು ಮಾತನಾಡಿದ ಅವರು, ಈಗಾಗಲೇ ಕೊಡಗಿನಲ್ಲಿ ಮಳೆ ಶುರುವಾಗಿದ್ದು, ಕೆಆರ್‍ಎಸ್ ತುಂಬುತ್ತದೆ. ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬಂತಾಗಿದೆ ನಮ್ಮ ಪರಿಸ್ಥಿತಿ. ಮಳೆಗೆ ಮನೆಗಳಿಗೂ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು. ಹುಲಿ ಸೇರಿದಂತೆ ಕಾಡು ಪ್ರಾಣಿಗಳಿಂದ ಆಗುವ ಹಾನಿ ಹಾಗೂ ಜಾನುವಾರುಗಳಿಗೆ ನೀಡುವ ಪರಿಹಾರ ಹೆಚ್ಚಿಸಬೇಕು. ಸೂಕ್ತ ಪರಿಹಾರ ನೀಡದಿದ್ದರೆ ಹುಲಿಯನ್ನು ಊರಿಗೆ ಬಿಡಬೇಡಿ. ಹುಲಿಗಳನ್ನು ಹೇಗೆ ನಿಯಂತ್ರಣ ಮಾಡಬೇಕೆಂಬುದು ಕೊಡಗರಿಗೆ ಗೊತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿಯ ಶಾಸಕರಾದ ಅರಗಜ್ಞಾನೆಂದ್ರ, ಕುಮಾರಬಂಗಾರಪ್ಪ, ಅಪ್ಪಚ್ಚುರಂಜನ್, ಹರತಾಳ ಹಾಲಪ್ಪ, ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದರು. ತಲಚೇರಿ- ಮೈಸೂರು ನಡುವಿನ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಅವಕಾಶ ಕೊಡಬಾರದು. ಸರ್ಕಾರದ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಿ ಕೇರಳದವರು ಕರ್ನಾಟಕದಲ್ಲಿ ರೈಲ್ವೆ ಯೋಜನೆಗೆ ಸರ್ವೆ ಮಾಡದಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು. ತಾಲ್ಲೂಕು ಕಚೇರಿ ಹಾಗೂ ಕಂದಾಯ ಇಲಾಖೆಯಲ್ಲಿನ ಲೋಪದೋಷಗಳನ್ನು ಸರಿಪಡಿಸದಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ದಿಕ್ಕು ದೆಸೆಯಿಲ್ಲದ ರಾಜ್ಯಪಾಲರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದರು.

ಹಾವೇರಿಗೆ ಮೆಡಿಕಲ್ ಮತ್ತು ಕಾನೂನು ಕಾಲೇಜು ಬೇಕು:
ಹಾವೇರಿಯಲ್ಲಿ ಮೆಡಿಕಲ್ ಹಾಗೂ ಕಾನೂನು ಕಾಲೇಜನ್ನು ಪ್ರಾರಂಭಿಸಬೇಕೆಂದು ಬಿಜೆಪಿಯ ಶಾಸಕ ನೆಹರು ಓಲೇಕಾರ್ ಒತ್ತಾಯಿಸಿದರು.
ಶ್ರೀಮಂತರಿಗೂ ಬಿಪಿಎಲ್ ಕಾರ್ಡ್ ಸಿಕ್ಕಿವೆ. ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ಕೊಟ್ಟರೂ ತಕರಾರಿಲ್ಲ. ಆದರೆ,  ಕಡು ಬಡವರಿಗೂ ಬಿಪಿಎಲ್ ಕಾರ್ಡ್ ಸಿಗಬೇಕು. ಬಡವರ ಪರ ಸರ್ಕಾರ ಇರಬೇಕು. ರೈತರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಕೇವಲ ಭಾಷಣದಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.ರೈತರ ಸಮಸ್ಯೆ ಪರಿಹರಿಸುವ ಜನಹಿತ ಕಾಪಾಡುವ ಕಾರ್ಯ ಆಗಬೇಕು. ಒಟ್ಟಾರೆ ರಾಜ್ಯಪಾಲರ ಭಾಷಣ ನೀರಸವಾಗಿದೆ ಎಂದು ಟೀಕಿಸಿದರು.

Facebook Comments

Sri Raghav

Admin