ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ : ಜು.30ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

UT-Khadar
ಬೆಂಗಳೂರು, ಜು.6-ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ರಾಜ್ಯದಲ್ಲಿ ನಡೆಯುತ್ತಿದ್ದು ಅರ್ಜಿ ಸಲ್ಲಿಸಲು ಜು.30ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ವಸತಿ ಸಚಿವ ಯು.ಟಿ.ಖಾದರ್ ವಿಧಾನಸಭೆಗಿಂದು ತಿಳಿಸಿದರು. ಪ್ರಧಾನಮಂತ್ರಿ ಆವಾಸ್‍ಯೋಜನೆಯಡಿಯಲ್ಲಿ ಇದುವರೆಗೆ 15 ಲಕ್ಷ ನಿವೇಶನ ಹಾಗೂ ವಸತಿ ರಹಿತರನ್ನು ಗುರುತಿಸಲಾಗಿದೆ.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರು ನಿವೇಶನ ಮತ್ತು ವಸತಿ ರಹಿತರನ್ನು ಗುರುತಿಸಿ ಅರ್ಹ ಫಲಾನುಭವಿಗಳ ಅರ್ಜಿಯನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗುತ್ತದೆ. ಪ್ರತಿ ಅರ್ಜಿಗೆ 100ರೂ. ನೀಡಲಾಗುವುದು. ರಾಜ್ಯದಲ್ಲಿ ಅರ್ಹರನ್ನು ಕೈ ಬಿಡದಂತೆ ಸಮೀಕ್ಷೆ ನಡೆಸಲು ಸೂಚಿಸಿದ್ದು, ಒಂದು ವೇಳೆ ನಿಜವಾದ ಫಲಾನುಭವಿಗಳನ್ನು ಕೈ ಬಿಟ್ಟಿದ್ದೇ ಆದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಮೀಕ್ಷಾ ಕಾರ್ಯವನ್ನು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ಮಾಡಲಿದ್ದಾರೆ. ಕೇಂದ್ರ ಸರ್ಕಾರ ವಸತಿ ಯೋಜನೆಗೆ 72ಸಾವಿರ ಹಾಗೂ ರಾಜ್ಯ ಸರ್ಕಾರ 42 ಸಾವಿರ ರೂ. ನೀಡುತ್ತಿವೆ. ಬಸವ ವಸತಿ ಯೋಜನೆಯಡಿ 1.20 ಲಕ್ಷ ರೂ. ನೀಡಲಾಗುತ್ತಿದೆ ಎಂದು ಹೇಳಿದರು.

ಸಮಗ್ರ ವಸತಿ ನೀತಿ ಅಗತ್ಯ:
ಬಿಜೆಪಿಯ ಶಾಸಕರಾದ ಅರಗ ಜ್ಞಾನೆಂದ್ರ, ಕೆ.ಜಿ.ಬೋಪಯ್ಯ ಮತ್ತಿತರ ಸದಸ್ಯರು ವಸತಿ ಯೋಜನೆಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಮುಂದಾದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಸಮಗ್ರ ವಸತಿ ನೀತಿಯನ್ನು ಮಾಡುವ ಅಗತ್ಯವಿದೆ. ಪಕ್ಷಾತೀತವಾಗಿ ಎಲ್ಲಾ ಬಡವರಿಗೂ ವಸತಿ ನೀಡಬೇಕಾಗುತ್ತದೆ. ಹಿಂದಿನ ಸರ್ಕಾರದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿ ಮಾರ್ಗ ಸೂಚಿಗಳನ್ನು ನೀಡಲಾಗಿದೆ. ಆ ಸಮಿತಿಯಲ್ಲಿ ನಾವೂ ಒಬ್ಬರಾಗಿದ್ದು, ತಮ್ಮ ಸ್ವಕ್ಷೇತ್ರ ಶ್ರೀನಿವಾಸಪುರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿತ್ತು. ಅದು ಯಶಸ್ವಿಯಾಗಿದೆ.

ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದರೆ ವಸತಿ ಸಮಸ್ಯೆ ಆಗಾಗ ಬರುವುದಿಲ್ಲ ಎಂದರು. ನಾವು ಜನರ ಮಧ್ಯೆ ಇರುವುದರಿಂದ ನಮಗೆ ಮತ ನೀಡಿದವರು, ನೀಡದವರು ಎಂದು ವಿಭಜನೆ ಮಾಡಬಾರದು. ಎಲ್ಲ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಈ ವಿಚಾರದ ಬಗ್ಗೆ ಒಂದು ದಿನ ಸಮಗ್ರವಾಗಿ ಚರ್ಚೆ ಮಾಡೋಣ ಎಂದು ಸಲಹೆ ಮಾಡಿದರು.

Facebook Comments

Sri Raghav

Admin