ಬಲಿಷ್ಠ ಬ್ರೆಜಿಲ್ ಮಣಿಸಿ ಸೆಮಿ ಫೈನಲ್ಸ್ ಗೆ ಬೆಲ್ಜಿಯಂ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

Fifa-01

ಕಜಾನ್, ಜು.7- ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಬೆಲ್ಜಿಯಂ ತಂಡ ಬಲಿಷ್ಠ ಬ್ರೆಜಿಲ್‍ನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದ ಬ್ರೆಜಿಲ್ ಈ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದು. ಮುಖಭಂಗದೊಂದಿಗೆ ಪಂದ್ಯಾವಳಿಯಿಂದ ಹೊರಬಿದ್ದಿದೆ. ಐದು ಬಾರಿ ಚಾಂಪಿಯನ್ ಆಗಿರುವ ಬ್ರೆಜಿಲ್ ನಿನ್ನೆ ತಡ ರಾತ್ರಿ ಕಜಾನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಕ್ವಾರ್ಟರ್ ಫೈನಲ್‍ನಲ್ಲಿ ಬೆಲ್ಜಿಯಂ ವಿರುದ್ದ 1-2 ಗೋಲುಗಳಲ್ಲಿ ಪರಾಭವಗೊಂಡು ಭಾರೀ ನಿರಾಸೆ ಅನುಭವಿಸಿತು.

ಅತ್ಯಂತ ಬಲಿಷ್ಠ ತಂಡಗಳಾದ ಅರ್ಜೆಂಟೀನಾ, ಜರ್ಮನಿ, ಉರುಗ್ವೆ ಮತ್ತು ಪೆÇೀರ್ಚುಗಲ್ ನಂತರ ಬ್ರೆಜಿಲ್ ವಿಶ್ವಕಪ್ ಪಂದ್ಯಾವಳಿಯಿಂದ ನಿರ್ಗಮಿಸಿರುವುದು ಸಾಂಬಾ ನಾಡಿನ ಫುಟ್ಬಾಲ್ ಪ್ರೇಮಿಗಳಿಗೆ ಆಘಾತ ಉಂಟು ಮಾಡಿದೆ. ಪಂದ್ಯ ಆರಂಭವಾಗಿ 13ನೇ ನಿಮಿಷದಲ್ಲಿ ಬೆಲ್ಜಿಯಂ ಆಕ್ರಮಣಕಾರಿ ಆಟಗಾರ ಫರ್ನಾಂಡಿನೋ ಭರ್ಜರಿ ಗೋಲು ಬಾರಿಸಿ ತಂಡವನ್ನು 1-0 ಮುನ್ನಡೆ ಸಾಧಿಸಲು ನೆರವಾದರು.

ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಬ್ರೆಜಿಲ್‍ಗೆ 31ನೇ ನಿಮಿಷದಲ್ಲಿ ಮತ್ತೊಂದು ಆಘಾತವಾಯಿತು. ಬೆಲ್ಜಿಯಂನ ಕೆವಿನ್ ಡಿ ಬ್ರೂಯಿನ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ 2-0 ಮುನ್ನಡೆ ತಂದು ಕೊಟ್ಟರು. ಪ್ರಥಮಾರ್ಧ ಪೂರ್ಣಗೊಂಡಾಗ ವಿಶ್ವದ ತೃತೀಯ ಶ್ರೇಯಾಂಕದ ತಂಡ 2-0 ಗೋಲುಗಳಲ್ಲಿ ಸುಸ್ಥಿತಿಯಲ್ಲಿತ್ತು.

ದ್ವಿತೀಯಾರ್ಧದಲ್ಲಿ ತೀವ್ರ ಹಣಾಹಣಿ ಮುಂದುವರಿಯಿತು. ಮತ್ತೊಂದು ಗೋಲು ಬಾರಿಸಲು ಬೆಲ್ಜಿಯಂ ತೀವ್ರ ಯತ್ನ ನಡೆಸಿತಾದರೂ, ಅದು ಸಾಧ್ಯವಾಗಲಿಲ್ಲ. ಏತನ್ಮಧ್ಯೆ 76ನೇ ನಿಮಿಷದಲ್ಲಿ ರೆನಾಟೋ ಅಗಸ್ಟೋ ಬಾರಿಸಿದ ಗೋಲು ಬ್ರೆಜಿಲ್ ಗೆಲುವಿನ ಆಸೆಯನ್ನು ಚಿಗುರಿಸಿತು. ಈ ಹಂತದಲ್ಲಿ 1-2 ಗೋಲುಗಳ ಅಂತರವಿತ್ತು.ಮುಂದಿನ 10 ನಿಮಿಷಗಳಲ್ಲಿ ಗೋಲುಗಳನ್ನು ಬಾರಿಸಲು ಉಭಯ ತಂಡಗಳಿಗೆ ಅವಕಾಶವಿದ್ದರೂ ಆ ಪ್ರಯತ್ನ ಈಡೇರಲಿಲ್ಲ.

ಕೊನೆಗೆ ಬ್ರೆಜಿಲ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಬೆಲ್ಜಿಯಂ ನಾಲ್ಕರ ಘಟ್ಟ ಪ್ರವೇಶಿಸಿದೆ. 2014ರ ವಿಶ್ವಕಪ್ ಸೆಮಿ ಫೈನಲ್ಸ್‍ನಲ್ಲಿ ಸೋತು ನಿರಾಸೆ ಅನುಭವಿಸಿದ್ದ ಬ್ರೆಜಿಲ್‍ಗೆ 2018ರ ಕಾಲ್ಚೆಂಡಿನ ಸಮರದಲ್ಲಿ ಕ್ವಾರ್ಟರ್ ಫೈನಲ್‍ನಲ್ಲೇ ಆಘಾತವಾಗಿದೆ. ಮೊದಲ ಕ್ವಾರ್ಟರ್ ಫೈನಲ್ಸ್‍ನಲ್ಲಿ ಉರುಗ್ವೆ ವಿರುದ್ಧ 2-0 ಗೋಲುಗಳಿಗೆ ಭರ್ಜರಿ ಜಯ ಸಾಧಿಸಿದ ಫ್ರಾನ್ಸ್ ವಿರುದ್ಧ ಸೆಮಿಫೈನಲ್ಸ್‍ನಲ್ಲಿ ಬೆಲ್ಜಿಯಂ ಸೆಣಸಲಿದೆ.

Facebook Comments

Sri Raghav

Admin