2ನೇ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಗೆ 5 ವಿಕೆಟ್ ಗಳ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Ind-v-eng

ಕಾರ್ಡಿಫ್, ಜು.7- ಇಲ್ಲಿ ನಡೆದ ಟಿ-20 ಏಕದಿನ ಕ್ರಿಕೆಟ್ ಸರಣಿಯ ಎರಡನೆ ಪಂದ್ಯ ಕೊನೆಯ ಓವರ್‍ವರೆಗೂ ರೋಚಕತೆ ಮೂಡಿಸಿ ಕೊನೆಗೂ ಭಾರತದ ವಿರುದ್ಧ ಅತಿಥೇಯ ಇಂಗ್ಲೆಂಡ್ ಜಯ ಸಾಧಿಸಿದೆ. ಮೊದಲು ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಇಂಗ್ಲೆಂಡ್‍ನ ನಾಯಕ ಮಾರ್ಗನ್ ಅವರ ಲೆಕ್ಕಾಚಾರ ಸರಿಯಾಗಿತ್ತು. ಭಾರತ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು.

ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಅವರು ಭಾರೀ ಭರವಸೆ ಮೂಡಿಸಿ ಕಣಕ್ಕಿಳಿದಿದ್ದರು. ಆದರೆ ಎರಡನೆ ಓವರ್‍ನಲ್ಲಿಯೇ ರೋಹಿತ್ ಶರ್ಮ ಮತ್ತೆ ವಿಫಲರಾಗಿ ಬಾಲ್ ಅವರ ಅದ್ಭುತ ಚೆಂಡಿನ ಲಯ ಅರಿಯದೆ ಕೀಪರ್ ಬಟ್ಲರ್‍ಗೆ ಕ್ಯಾಚ್ ಇತ್ತು ಹೊರ ನಡೆದರು. ನಂತರ ಬಂದ ಮೊದಲ ಪಂದ್ಯದ ಶತಕ ವೀರ ಕನ್ನಡಿಗ ಕೆ.ಎಲ್.ರಾಹುಲ್ ತಮ್ಮ ನೈಜ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ ಅವರ ಜತೆಗಿದ್ದ ಶಿಖರ್ ಧವನ್ ರನ್ ಗಳಿಸಲು ಪ್ರಯಾಸ ಪಡುತ್ತಿದ್ದರು.

ಈ ಒತ್ತಡವನ್ನು ಅರ್ಥ ಮಾಡಿಕೊಂಡ ಇಂಗ್ಲೆಂಡ್ ಬೌಲರ್‍ಗಳನ್ನು ಬದಲಿಸಿ ಒತ್ತಡವನ್ನು ಹೆಚ್ಚಿಸಿತು. ಇದರ ಫಲವಾಗಿ ಇಲ್ಲದ ರನ್ ಕದಿಯಲು ಹೋಗಿ ಶಿಖರ್ ಧವನ್ (10) ರನ್ ಔಟ್ ಆದರು.ದಿಢೀರ್ ಕುಸಿದ ತಂಡವನ್ನು ಅಪಾಯದಿಂದ ಪಾರು ಮಾಡಲು ನಂತರ ಬಂದ ನಾಯಕ ಕೊಹ್ಲಿ ಆಕರ್ಷಕ ಹೊಡೆತಗಳ ಮೂಲಕ ಬೌಂಡರಿಗಳನ್ನು ಸಿಡಿಸಿದರು. ಆದರೆ ಇನ್ನೊಂದೆಡೆ ಕೆ.ಎಲ್.ರಾಹುಲ್ (6) ಅವರು ಅದೇ ರೀತಿ ಆಡಲು ಹೋಗಿ ಪ್ಲುನ್ ಕಿಟ್ ಅವರ ಬೌಲಿಂಗ್‍ನಲ್ಲಿ ಔಟಾದರು.

22 ರನ್‍ಗಳಾಗುವಷ್ಟರಲ್ಲಿ ಭಾರತ 3 ವಿಕೆಟ್ ಅನ್ನು ಕಳೆದುಕೊಂಡಿತ್ತು. ಅಪಾಯವನ್ನು ಅರಿತು ಎಚ್ಚರಿಕೆಯ ಆಟಕ್ಕೆ ಮುಂದಾದ ಕೊಹ್ಲಿ ಮತ್ತು ನಾಲ್ಕನೆ ಕ್ರಮಾಂಕದಲ್ಲಿ ಬಂದ ಸುರೇಶ್ ರೈನಾ ರನ್ ವೇಗವನ್ನು ಹೆಚ್ಚಿಸಿದರು. ಮೇಲಿನ ಕ್ರಮಾಂಕದ ಬ್ಯಾಟ್ಸ್‍ಮೆನ್‍ಗಳು ವಿಫಲವಾದ ನಂತರ ಸವಾಲಿನ ಮೊತ್ತ ಕಲೆ ಹಾಕಲು ಈ ಜೋಡಿ ಭಾರೀ ಪ್ರಯಾಸ ಪಟ್ಟಿತು.

47 ರನ್ ಮಾಡಿದ ಕೊಹ್ಲಿ ಅವರು ಇಂಗ್ಲೆಂಡ್ ವೇಗಿ ವಿಲಿ ಅವರ ಬೌಲಿಂಗ್‍ನಲ್ಲಿ ಔಟಾದರೆ ಉತ್ತಮ ಲಯ ಕಂಡುಕೊಂಡಿದ್ದ ರೈನಾ(27) ಕೂಡ ಸ್ಪಿನ್ ಮಾಂತ್ರಿಕ ರಷಿದ್ ಅವರಿಗೆ ವಿಕೆಟ್ ಒಪ್ಪಿಸಿದರು. ಅಂತಿಮ 5 ಓವರ್‍ಗಳಲ್ಲಿ ಧೋನಿ ಮೇಲೆ ಭಾರೀ ಒತ್ತಡ ಕಂಡು ಬಂತು. ಆದರೂ ತಮ್ಮ ನೈಜ ಆಟವನ್ನು ಪ್ರದರ್ಶಿಸಿ ಪಾಂಡ್ಯ ಜತೆಗೂಡಿ 20 ಓವರ್‍ಗಳಲ್ಲಿ 148 ರನ್‍ಗಳನ್ನು ಕಲೆ ಹಾಕಿ ಇಂಗ್ಲೆಂಡ್‍ಗೆ ಅಲ್ಪ ಮೊತ್ತದ ಸವಾಲನ್ನು ಮುಂದಿಟ್ಟರು. ಕಡಿಮೆ ಮೊತ್ತದ ಗುರಿ ಯಾವಾಗಲೂ ಒತ್ತಡವನ್ನು ತರುತ್ತದೆ ಎಂಬುದು ಇಂಗ್ಲೆಂಡ್‍ನ ಬ್ಯಾಟಿಂಗ್‍ನಲ್ಲಿ ಸಾಬೀತಾಯಿತು.

ಇಂಗ್ಲೆಂಡ್ ಪರ ಆರಂಭಿಕರಾಗಿ ಬಂದ ಸ್ಫೋಟಕ ಬ್ಯಾಟ್ಸ್‍ಮೆನ್ ಜೆ.ಜೆ.ರಾಯ್ ಮತ್ತು ಬಟ್ಲರ್ ಜೋಡಿಯನ್ನು ಮುರಿಯುವಲ್ಲಿ ಭಾರತದ ವೇಗಿ ಉಮೇಶ್ ಯಾದವ್ ಯಶಸ್ವಿಯಾದರು.ಮೂರನೆ ಓವರ್‍ನ ಮೊದಲ ಚೆಂಡಿನಲ್ಲೇ ರಾಯ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿ ಪೆವಿಲನಯನ್‍ಗೆ ಅಟ್ಟುವಲ್ಲಿ ಯಶಸ್ವಿಯಾಗಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಪುಟಿದೆದ್ದು ಬರುತ್ತಿದ್ದ ಉಮೇಶ್ ಅವರ ವೇಗದ ಚೆಂಡನ್ನು ಎದುರಿಸಲು ಇಂಗ್ಲೆಂಡ್‍ನ ಬ್ಯಾಟ್ಸ್‍ಮೆನ್‍ಗಳು ಸ್ವಲ್ಪ ವಿಚಲಿತರಾದರು. ನಾಯಕ ವಿರಾಟ್ ಕೊಹ್ಲಿ ಎಷ್ಟು ಬೇಗ ವಿಕೆಟ್‍ಗಳನ್ನು ಉರುಳಿಸುತ್ತೇವೆಯೋ ಅಷ್ಟು ಬೇಗ ನಮಗೆ ಜಯದ ಹಾದಿ ಸುಗಮವಾಗಲಿದೆ ಎಂಬ ತಂತ್ರದೊಂದಿಗೆ ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಇಂಗ್ಲೆಂಡ್ ತಂಡ 33 ರನ್ ಕಲೆ ಹಾಕುವಷ್ಟರಲ್ಲಿ ಉಮೇಶ್ ಯಾದವ್ ಮತ್ತೊಂದು ಆಘಾತ ನೀಡಿದರು. ಅಪಾಯಕಾರಿಯಾಗಿದ್ದ ಬಟ್ಲರ್ ಅವರ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಹೊಸ ಹುರುಪು ತಂದುಕೊಟ್ಟರು.

ನಂತರ ನಡೆದಿದ್ದು ಸ್ಪಿನ್ ದಾಳಿ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್‍ಗಳನ್ನು ಚಡಪಡಿಸುವಂತೆ ಮಾಡಿದ್ದ ಭಾರತದ ಸ್ಪಿನ್ನರ್‍ಗಳಾದ ಕುಲ್‍ದೀಪ್ ಯಾದವ್ ಮತ್ತು ಚಹಲ್ ಅವಕಾಶಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಚಹಲ್ ಬೌಲಿಂಗ್‍ನಲ್ಲಿ ಮತ್ತೆ ಇಂಗ್ಲೆಂಡ್ ನಾಯಕ ಜೋಸ್ ರೂಟ್ ಔಟಾದರು. ನಂತರ ನಾಲ್ಕನೆ ಕ್ರಮಾಂಕದ ಆಟಗಾರರಾಗಿ ಬಂದ ಹೇಲ್ಸ್ ತಂಡವನ್ನು ಸುಸ್ತಿಗೆ ತರುವಲ್ಲಿ ಯಶಸ್ವಿಯಾದರು.  ಇದಕ್ಕೆ ನಾಯಕ ಮಾರ್ಗನ್ ಕೂಡ ಕೆಲ ಹೊತ್ತು ಸಹಕಾರಿಯಾದರು. ಇನ್ನೇನು ಇಂಗ್ಲೆಂಡ್ ಜಯ ಸಾಧಿಸುತ್ತೆ ಎನ್ನುವಷ್ಟರಲ್ಲಿ ಭುವನೇಶ್ವರ್ ಕುಮಾರ್ ಮತ್ತು ಪಾಂಡ್ಯ ಉತ್ತಮ ಬೌಲಿಂಗ್ ಮಾಡಿ ರನ್ ಹೊಳೆಯನ್ನು ನಿಲ್ಲಿಸಿದರು. ಪ್ರಮುಖ ವಿಕೆಟ್‍ಗಳನ್ನು ಉರುಳಿಸುವ ಮೂಲಕ ಭಾರತದ ಆಶಾವಾದವನ್ನು ಜೀವಂತವಾಗಿಟ್ಟಿದ್ದರು.

ಕೊನೆಯ ಓವರ್‍ನಲ್ಲಿ 12 ರನ್ ಬೇಕಾಗಿತ್ತು. ಅರ್ಧ ಶತಕ ಸಿಡಿಸಿದ್ದ ಹೇಲ್ಸ್ ಭುವನೇಶ್ವರ ಕುಮಾರ್ ಅವರ ಬೌಲಿಂಗ್‍ನಲ್ಲಿ ಬೌಂಡರಿಗಳನ್ನು ಸಿಡಿಸುವ ಮೂಲಕ ಇನ್ನು ಎರಡು ಚೆಂಡು ಉಳಿದಿರುವಂತೆಯೇ ಇಂಗ್ಲೆಂಡ್‍ಗೆ ಜಯವನ್ನು ತಂದುಕೊಟ್ಟರು. ಆಪದ್ಭಾಂದವರ ಪಾತ್ರ ನಿರ್ವಹಿಸಿದ ಹೇಲ್ಸ್ ಇಂಗ್ಲೆಂಡ್‍ಗೆ ಸರಣಿಯಲ್ಲಿ 1-1ರ ಸಮ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್:
ಭಾರತ 148/5 (20 ಓವರ್)
ಇಂಗ್ಲೆಂಡ್ 149/5 (19.4 ಓವರ್)

Facebook Comments

Sri Raghav

Admin