ಮಠಗಳು ವಿಧಾನಸೌಧಕ್ಕೆ ಬರುತ್ತಿವೆ : ಬರಗೂರು ರಾಮಚಂದ್ರಪ್ಪ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

baraguru-ramachandrappa
ಬೆಂಗಳೂರು, ಜು.7- ಧರ್ಮ, ಜಾತಿ, ರಾಜಕಾರಣ ಮೂರೂ ಸೇರಿ ಗಾಂಧರ್ವ ವಿವಾಹವಾಗಿರುವುದರಿಂದ ಮಠಗಳು ವಿಧಾನಸೌಧಕ್ಕೆ ಬರುತ್ತಿವೆ. ವಿಧಾನಸೌಧ ಮಠಕ್ಕೆ ಹೋಗುವಂತಹ ವೈಪರೀತ್ಯಗಳು ಉಂಟಾಗುತ್ತಿವೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಪತ್ರಿಕೆ ಆರಂಭವಾದ ಮೂಲ ಆಶಯಗಳೇ ಬೇರೆ. ಕಾಲಾನಂತರ ಅವುಗಳ ರೂಪಾಂತರವಾಗಿ ಈಗಿನ ಆಶಯಗಳೇ ಬೇರೆಯಾಗಿದೆ. 1780ರಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಬೆಂಗಾಲ್ ಗೆಜೆಟ್ ಆರಂಭಿಸಿದ ಉದ್ದೇಶ ಈಸ್ಟ್ ಇಂಡಿಯಾ ಕಂಪೆನಿಯ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವುದಾಗಿತ್ತು. ಕರ್ನಾಟಕದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾದಾಗ ಅವರು ತಮ್ಮ ಸಂಪಾದಕೀಯದಲ್ಲಿ ಕಿಟಕಿಗಳಿಲ್ಲದ ಮನೆಗೆ ಪತ್ರಿಕೆಗಳು ಕಿಟಕಿಗಳಾಗುತ್ತವೆ. ಬೆಳಕು ನೀಡುತ್ತವೆ ಎಂಬ ಸದಾಶಯವನ್ನು ವ್ಯಕ್ತಪಡಿಸಿದ್ದರು ಎಂದರು.

ಆದರೆ, ನಾವು ಇಂದಿನ ಕಾಲದಲ್ಲಿ ಕತ್ತಲನ್ನೇ ಬೆಳಕು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಪತ್ರಿಕೆ ಎಂಬುದು ಈಗ ವೃತ್ತಿಯಾಗಿ ಉಳಿದಿಲ್ಲ. ಉದ್ಯಮವಾಗಿ ಪರಿವರ್ತನೆಯಾಗಿದೆ. ಪುಸ್ತಕ, ಚಲನಚಿತ್ರ ಮಾಧ್ಯಮಗಳೂ ಕೂಡ ಇಂದು ಉದ್ಯಮಗಳಾಗಿವೆ. ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಸ್ವಾತಂತ್ರ್ಯ ಎಂಬುದು ಇಲ್ಲ. ಮಾಲೀಕರ ಮೆದುಳಿನಲ್ಲಿ ಹೊಳೆಯುವ ಆಲೋಚನೆಗಳನ್ನೇ ಜಾರಿಗೆ ತರಬೇಕಿದೆ ಎಂದು ಹೇಳಿದರು. ಇಂದಿನ ಪತ್ರಿಕೋದ್ಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈ ಮೊದಲು ಜೈಲ್‍ಸಿಂಗ್ ಎಂಬ ರಾಷ್ಟ್ರಪತಿ ಅವರು ನಾನು ಇಂದಿರಾಗಾಂಧಿ ಅವರು ಹೇಳಿದರೆ ಕಸ ಗುಡಿಸಲು ಸಿದ್ದ ಎಂದು ನೀಡಿದ್ದ ಹೇಳಿಕೆ ದೊಡ್ಡ ಸುದ್ದಿಯಾಗಿತ್ತು. ಅದೇ ರಾಷ್ಟ್ರಪತಿಯವರು ದಲಿತರಿಗೆ ಪ್ರವೇಶವಿಲ್ಲದ ದೇವಸ್ಥಾನಕ್ಕೆ ನಾನು ಬರುವುದಿಲ್ಲ ಎಂದು ಹೇಳಿದ್ದು ಸುದ್ದಿ ಆಗಲೇ ಇಲ್ಲ. ಕೆ.ಆರ್.ನಾರಾಯಣ್ ಅವರು ವಾಜಪೇಯಿ ಅವರಿಗೆ ಪತ್ರಬರೆದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ರಾಜಧರ್ಮ ಪಾಲಿಸಲು ಹೇಳಿ ಎಂದು ಸಲಹೆ ನೀಡಿದ್ದರು. ಆದರೆ, ರಾಜಧರ್ಮ ಎಂಬ ಹಕ್ಕು ಸ್ವಾಮ್ಯತೆ ವಾಜಪೇಯಿ ಅವರ ಹೆಸರಿಗೆ ವರ್ಗಾವಣೆಯಾಯಿತು. ಪತ್ರಿಕೋ ದ್ಯಮದಲ್ಲಿ ವಾಸ್ತವ ಅಂಶಗಳಿಗಿಂತ ಅತಿರೇಖಗಳು ಮತ್ತು ವಾಣಿಜ್ಯ ಪ್ರೇರಿತ ಆಲೋಚನೆಗಳು ಹೆಚ್ಚಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಕಣಕಾರ ದಿನೇಶ್ ಅಮಿನ್‍ಮಟ್ಟು ಮಾತನಾಡಿ, ಭಾರತದಲ್ಲಿ ಉತ್ಪಾ ದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ವಸ್ತು ಎಂದರೆ ಅದು ಪತ್ರಿಕೆ ಮಾತ್ರ. ಇಲ್ಲಿ ಓದುಗನಿಗಿಂತಲೂ ಜಾಹೀರಾತುದಾರರೇ ಪ್ರಮುಖರಾಗುತ್ತಾರೆ. ಹಾಗಾಗಿ ಪತ್ರಿಕೆಗಳು ಮತ್ತು ಮಾಧ್ಯಮಗಳು ಹೆಚ್ಚು ರಾಜಕಾರಣಿಗಳನ್ನೇ ಟೀಕಿಸುತ್ತವೆ ಹೊರತು, ಉದ್ಯಮಿಗಳತ್ತ ಗಮನ ಹರಿಸುವುದಿಲ್ಲ ಎಂದು ಹೇಳಿದರು. ಪತ್ರಕರ್ತ ಸ್ವತಂತ್ರವಾಗಿ ಆಲೋಚಿಸುವ, ಬರೆಯುವ, ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಇಲ್ಲ. ಅದಕ್ಕಿಂತಲೂ ವಿಷಾದಕರ ಎಂದರೆ ರಾಜಕಾರಣಿಗಳಂತೆ ಪತ್ರಿಕೋದ್ಯಮದಲ್ಲೂ ಭ್ರಷ್ಟರಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Facebook Comments

Sri Raghav

Admin