ನಿವೃತ್ತ ಮುಖ್ಯಕಾರ್ಯದರ್ಶಿ ರತ್ನಪ್ರಭ ಅವರ `ಕ್ರಾನಿಕಲ್ಸ್ ಆಫ್ ಆ್ಯನ್ ಎಸಿ ಸಾಬ್’ ಕೃತಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Ratnaprabha--01

ಬೆಂಗಳೂರು, ಜುಲೈ 07, 2018: ಇದುವರೆಗೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿರುವ ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭ ಅವರದು ಸರಳ ವ್ಯಕ್ತಿತ್ವ. ತಮ್ಮ ಸುದೀರ್ಘ ಸೇವೆಯಲ್ಲಿ ಆಗಿರುವ ಹಂಚಿಕೊಳ್ಳಲೆಂದು ಬಯಸಿದ ಅವರು `ಕ್ರಾನಿಕಲ್ಸ್ ಆಫ್ ಆ್ಯನ್ ಎಸಿ ಸಾಬ್’ ಎಂಬ ಅನುಭವ ಕಥನದ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರದ ಐಎಎಸ್ ಮತ್ತು ಐಪಿಎಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪೈಕಿ ನಾನು ಕಂಡ ಅತ್ಯಂತ ಸರಳ ಮತ್ತು ಸಜ್ಜನಿಕೆಯ ಅಧಿಕಾರಿ ಎಂದರೆ ಶ್ರೀಮತಿ ರತ್ನಪ್ರಭ ಅವರು. ಪ್ರತಿಯೊಂದು ವಿಚಾರದಲ್ಲೂ ಸರಳತೆಯನ್ನು ಮೆರೆಯುವ ರತ್ನಪ್ರಭ ಅವರು ತಮ್ಮ ವೃತ್ತಿ ಜೀವನಕ್ಕೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಬೀದರ್‍ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ರತ್ನಪ್ರಭ ಅವರು, ಆರಂಭದ ದಿನಗಳಲ್ಲಿ ತಮ್ಮನ್ನು ಕಾಣಲು ಬರುವ ಜನರನ್ನು ಭೇಟಿ ಮಾಡಲು ಹಿಂಜರಿಯುತ್ತಿದ್ದರು. ಇದಕ್ಕೆ ಕಾರಣ ಅವರಲ್ಲಿದ್ದ ನಾಚಿಕೆ ಸ್ವಭಾವ. ಆ ಸಂದರ್ಭದಲ್ಲಿ ಜನರು ಬಂದಾಗ ರತ್ನಪ್ರಭ ಅವರು ಅಡುಗೆ ಕೋಣೆಯಲ್ಲಿ ಅವಿತು ಜನರೊಂದಿಗೆ ಮಾತನಾಡಲು ತಮ್ಮ ತಾಯಿಯನ್ನು ಕಳುಹಿಸುತ್ತಿದ್ದರು. ಅಷ್ಟರ ಮಟ್ಟಿಗೆ ನಾಚಿಕೆ ಮತ್ತು ಸಂಕೋಚ ಹೊಂದಿದ ಸ್ವಭಾವದವರಾಗಿದ್ದರು. ಈ ವಿಚಾರವನ್ನು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಕೃತಿಯನ್ನು ಬರೆಯುವ ಬಗ್ಗೆ ಆಲೋಚನೆಯನ್ನೇ ಮಾಡಿರಲಿಲ್ಲ. ನನ್ನ ಅನುಭವವನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಹೀಗೆ ಬರೆದಿಟ್ಟುಕೊಳ್ಳುವಾಗ ಒಂದು ದಿನ ಈ ಬಗ್ಗೆ ಪುಸ್ತಕ ಬರೆದರೆ ಹೇಗೆ ಎಂದು ಆಲೋಚನೆ ಮಾಡಿದೆ. ಇದಕ್ಕೆ ನನ್ನ ಮಗಳೂ ಸಹ ಪುಸ್ತಕ ಬರೆಯುವಂತೆ ಸಲಹೆ ನೀಡಿದಳು. ಇದರ ಪರಿಣಾಮವೇ ನನ್ನ ಅನುಭವದ ಮಾತುಗಳನ್ನು ಅಕ್ಷರ ರೂಪಕ್ಕೆ ತಂದಿದ್ದೇನೆ ಎಂದು ರತ್ನಪ್ರಭ ತಿಳಿಸಿದರು.

215 ಪುಟಗಳ ಈ ಪುಸ್ತಕದಲ್ಲಿ ರತ್ನಪ್ರಭ ಅವರು ಬೀದರ್‍ನಲ್ಲಿ ತಮ್ಮ ವೃತ್ತಿಜೀವನದ ಆರಂಭದ ದಿನಗಳಿಂದ ನಿವೃತ್ತಿಯಾಗುವವರೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. 2017 ರ ಸೆಪ್ಟಂಬರ್-ಅಕ್ಟೋಬರ್‍ನಲ್ಲಿ ಬರೆಯಲು ಆರಂಭಿಸಿ ಇದೀಗ ಮುಗಿಸಿರುವ ಈ ಪುಸ್ತಕದಲ್ಲಿ ತಮ್ಮ ನೆನಪಿಗೆ ಬಂದ ಬಹುತೇಕ ಅನುಭವವಗಳನ್ನು ಒಡಮೂಡಿಸಿದ್ದಾರೆ. ಇನ್ನೂ ಕೆಲವು ಅನುಭವಗಳು ನೆನಪಿಗೆ ಬಂದಿಲ್ಲ ಎನ್ನುತ್ತಾರೆ ರತ್ನಪ್ರಭ.

ನಾನು ಪ್ರತಿ ಬಾರಿ ಬೀದರ್‍ಗೆ ಹೋದಾಗ ಅಲ್ಲಿನ ಜನರು ನನ್ನನ್ನು ಭೇಟಿ ಮಾಡಿ ಅವರಿಗೆ ನನ್ನಿಂದ ಆದ ಒಳ್ಳೆಯ ಕೆಲಸಗಳನ್ನು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಒಬ್ಬ ಅಧಿಕಾರಿಗೆ ಇದಕ್ಕಿಂತ ಒಳ್ಳೆಯ ಪ್ರಶಸ್ತಿ ಮತ್ತೊಂದಿಲ್ಲ ಎನ್ನುವ ರತ್ನಪ್ರಭ, ನಿಸ್ವಾರ್ಥ ಸೇವೆಯ ಬದ್ಧತೆ ಇದ್ದರೆ ಜನರ ಮನಃಪಟಲದಲ್ಲಿ ಉಳಿಯಬಹುದು ಎನ್ನುತ್ತಾರೆ. ಈ ಸುಂದರ ಸಮಾರಂಭದಲ್ಲಿ ಸ್ಯಾನ್‍ಸಿಟಿ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಶ್ವಕಾರ್ಯಪ್ಪ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಹಾಜರಿದ್ದರು.

Facebook Comments

Sri Raghav

Admin