ಅನುಮಾನವೇ ಬೇಡ, ಸಿಗರೇಟು ಸೇದಿದರೆ ಹೊಗೆ ಹಾಕೊತೀರಾ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Smkoing--01

ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ವಿಷಯ ಎಲ್ಲರಿಗೂ ಗೊತ್ತು, ಪ್ರತಿ ಸಿಗರೇಟ್ ಪ್ಯಾಕ್ ಮೇಲೆಯೂ ಈ ವಿಷಯವನ್ನು ದೊಡ್ಡದಾಗಿ ಬರೆಯಲಾಗಿರುತ್ತೆ ಆದರೂ ಸಿಗರೇಟ್ ಸೇರುವವರ ಸಂಖ್ಯೆ ಕಡಿಮೆಯಾಗಿಲ್ಲ. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ, ಧೂಮಪಾನ ಕೆಟ್ಟದ್ದು ಎಂದು ಗೊತ್ತಿದ್ದರೂ ಧೂಮಪಾನದಿಂದ ದೂರವಿರಲು ಸಾಧ್ಯವಾಗುವುದಿಲ್ಲ. ಧೂಮಪಾನ ಅದೆಷ್ಟು ಜನರನ್ನು ಬಲಿ ಪಡೆದಿದೆ ಎಂಬ ಕುರಿತು ಈ ಕೆಳಗಿನ ಅಂಕಿ ಅಂಶಗಳು ನಿಮ್ಮನ್ನು ಧೂಮಪಾನದಿಂದ ದೂರವಿರಲು ಸ್ವಲ್ಪ ಮಟ್ಟಿಗೆಯಾದರೂ ಆಲೋಚಿಸುವಂತೆ ಮಾಡುತ್ತವೆ, ಸಿಗರೇಟು ಸೇದುವುದರಿಂದ ಸಾವು ಖಚಿತ, ಇದರಲ್ಲಿ ಅನುಮಾನ ಬೇಡ, ನೀವು ಸಿಗರೇಟು ಸೇದುತ್ತಿದ್ದರೆ ಈ ಕ್ಷಣದಿಂದಲೇ ಬಿಟ್ಟುಬಿಡಿ ಇಲ್ಲದಿದ್ದರೆ ಈ ಕೆಳಗಿನ ಸಾವಿನ ಸಂಖ್ಯೆಯಲ್ಲಿ ನೀವು ಸೇರುವುದು ಬಹಳ ದೂರವೇನಿಲ್ಲ .

ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುವ ಸಿಗರೇಟ್, ಬೀಡಿ, ಚುಟ್ಟಾ, ಸಿಗಾರ್ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಸೇವನೆಯಿಂದ, ಹೃದಯಘಾತ, ವಿವಿಧ ರೀತಿಯ ಕ್ಯಾನ್ಸರ್ ಮುಂತಾದ ಮಾರಕ ರೋಗಗಳು ಬರುತ್ತವೆ. ತಂಬಾಕು ಪದಾರ್ಥಗಳನ್ನು ಬಳಸುವುದರ ಮೂಲಕ ನಮಗೆ ನಾವೇ ಮಾರಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ಚಟದಿಂದ ದೂರವಿರುವುದು ಧೂಮಫಾನಿಗಳಿಗೆ ತೀರಾ ಅಗತ್ಯವಾಗಿದೆ.

ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷ ಮಂದಿ ತಂಬಾಕು ಸೇವನೆಯಿಂದ ಸಾವಿಗೀಡಾಗುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 2030ರ ಹೊತ್ತಿಗೆ 80 ಲಕ್ಷ ಜನ ತಂಬಾಕು ಸೇವೆಯಿಂದ ಮರಣವನ್ನಪ್ಪುವ ಸಾಧ್ಯತೆ ಇದೆ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ, ಪ್ರತಿ ವರ್ಷ ಸುಮಾರು 10 ಲಕ್ಷದಷ್ಟು ಜನರು ತಂಬಾಕು ಪದಾರ್ಥಗಳ ಸೇವನೆ ಮತ್ತು ಬಳಕೆಯಿಂದ ಸಾವಿಗೀಡಾಗುತ್ತಿದ್ದಾರೆ. ಪ್ರತಿನಿತ್ಯ 2200ಕ್ಕೂ ಹೆಚ್ಚು ಭಾರತೀಯರು ತಂಬಾಕು ಸೇವನೆಯಿಂದ ಮೃತರಾಗುತ್ತಿದ್ದಾರೆ. ಪ್ರತಿ ನೂರು ಕ್ಯಾನ್ಸರ್ ಪ್ರಕರಣಗಳಲ್ಲಿ 40 ತಂಬಾಕು ಸೇವನೆಗೆ ಸಂಬಂಧಪಟ್ಟಿದ್ದಾಗಿರುತ್ತದೆ. ಸುಮಾರು ಶೇಕಡ 93 ಬಾಯಿ ಕ್ಯಾನ್ಸರ್‍ಗೆ ತಂಬಾಕು ಸೇವನೆ ಕಾರಣ.

ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಲ್ಲಿ ಕ್ಯಾನ್ಸರ್, ಹೃದಯಾಘಾತ, ಆಧಿಕ ರಕ್ತದೊತ್ತಡ, ಪಾಶ್ರ್ವವಾಯು, ಶ್ವಾಸಕೋಶಗಳ ಕಾಯಿಲೆಗಲು, ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು, ಪಾದ ಹುಣ್ಣು ಮುಂತಾದ ಕಾಯಿಲೆಗಳು ಪ್ರಮುಖವಾಗಿವೆ. ಇದರ ಜೊತೆಗೆ ತಂಬಾಕು ಸೇವನೆಯಿಂದ ನಪುಂಸಕತ್ವ ಉಂಟಾಗುವ ಸಾಧ್ಯತೆಗಳಿವೆ. ಈ ರೀತಿ ತಂಬಾಕು ಸೇವನೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತವೆ ಜೊತೆಗೆ ಸಾರ್ವಜನಿಕವಾಗಿಯೂ ಧೂಮಪಾನಿಗಳಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ. ತಂಬಾಕು ಸೇವನೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾಯಿದೆ-ಕಾನೂನು-ನಿಯಮಗಳನ್ನು ರೂಪಿಸಿದ್ದರೂ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ದುರಂತದ ಸಂಗತಿಯಾಗಿದೆ.

ಸಿಗರೇಟು ಸೇದುವುದರಿಂದ ಹೊರ ಬರುವ ಹೊಗೆಯಲ್ಲಿ 7,000ಕ್ಕೂ ಹೆಚ್ಚು ರಾಸಾಯನಿಕಗಳಿವೆ. ಅವುಗಳ ಪೈಕಿ 69 ರಾಸಾಯನಿಕಗಳು ಮಾರಕ ಕ್ಯಾನ್ಸರ್‍ಗೆ ಕಾರಣವಾದರೆ, 100ಕ್ಕೂ ಅಧಿಕ ರಾಸಾಯನಿಕಗಳು ಮತ್ತು ವಿಷ ವಸ್ತುಗಳು ನಮ್ಮ ದೇಹದ ಡಿಎನ್‍ಎಗಳನ್ನು ನಾಶಪಡಿಸುತ್ತವೆ.  ಈ ರೀತಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಸಾಕಷ್ಟು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಧೂಮಪಾನಿಗಳು ಮತ್ತು ತಂಬಾಕಯುಕ್ತ ಪದಾರ್ಥಗಳನ್ನು ಸೇವಿಸುವವರು ಇನ್ನು ಮುಂದಾದರು ಇವುಗಳನ್ನು ತ್ಯಜಿಸಬೇಕಾದುದು ಅಗತ್ಯವಾಗಿದೆ. ಧೂಮಪಾನದಂಥ ಕೆಟ್ಟ ಚಟಗಳನ್ನು ಒಂದೇ ದಿನದಲ್ಲಿ ಬಿಡಲು ಸಾಧ್ಯವಿಲ್ಲ. ಆದರೆ ಹಂತ ಹಂತವಾಗಿ ಈ ಚಟದಿಂದ ಹೊರಬರಬಹುದು ಈ ನಿಟ್ಟಿದಲ್ಲಿ ಧೂಮಪಾನಿಗಳು ದೃಢಸಂಕಲ್ಪ ಮಾಡಬೇಕಿದೆ.

Facebook Comments

Sri Raghav

Admin