ಸುನಂದಾ ನಿಗೂಢ ಸಾವು ಪ್ರಕರಣದಲ್ಲಿ ಸಂಸದ ಶಶಿ ತರೂರ್’ಗೆ ಜಾಮೀನು
ನವದೆಹಲಿ, ಜೂ.5-ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರಿಗೆ ನ್ಯಾಯಾಲಯವೊಂದು ಇಂದು ಕ್ರಮಬದ್ಧ ಜಾಮೀನು ಮಂಜೂರು ಮಾಡಿದೆ.
ಪತ್ನಿ ಸುನಂದಾ ಸಾವು ಪ್ರಕರಣ ಕುರಿತಂತೆ ತಿರುವನಂತಪುರಂ ಸಂಸದ ಶಶಿ ತರೂರ್ ಅವರಿಗೆ ಈಗಾಗಲೇ ಈ ಪ್ರಕರಣದಲ್ಲಿ ಜೂ.5ರಂದು ಸಮನ್ಸ್ ಜಾರಿಗೊಳಿಸಿರುವ ನ್ಯಾಯಾಲಯ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಈ ಪ್ರಕರಣದ ಸಂಬಂಧ ನಿರೀಕ್ಷಣಾ ಜಾಮೀನು ನೀಡುವಂತೆ ಶಶಿ ತರೂರ್ ಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ ಸೂಚನೆಯಂತೆ ಮಾಜಿ ಸಚಿವ ತರೂರ್ ಇಂದು ವಿಚಾರಣೆಗೆ ಹಾಜರಾಗಿದ್ದರು. ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಕ್ರಮಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೇ ಸಾಕ್ಷ್ಯಾಧಾರಗಳಿಗೆ ಹಾನಿ ಮಾಡದಂತೆ ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ಬಿಟ್ಟು ಹೋಗದಂತೆ ಕೋರ್ಟ್ ಸೂಚನೆ ನೀಡಿದೆ.
ಸುನಂದಾ ಸಾವು ಪ್ರಕರಣ ಸಂಬಂಧ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದೇ ಆದರೆ, ಅವರು ದೇಶದಿಂದ ಪರಾರಿಯಾಗುವ ಸಾಧ್ಯತೆಗಳಿದ್ದು, ಅವರಿಗೆ ಬೇಲ್ ನೀಡದಂತೆ ದೆಹಲಿ ಪೊಲೀಸರು ಕೋರ್ಟ್ಗೆ ಮನವಿ ಮಾಡಿದ್ದರು. ಸುನಂದಾ ಪುಷ್ಕರ್ ಜನವರಿ 17, 2014ರಂದು ರಾತ್ರಿ ನವದೆಹಲಿಯ ಪಂಚತಾರಾ ಹೊಟೇಲ್ ಕೊಠಡಿಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.