ಕರಾವಳಿಯಲ್ಲಿ ಮುಂದುವರೆದ ವರುಣನ ಆರ್ಭಟ, ಉಕ್ಕಿ ಹರಿಯುತ್ತಿರುವ ನದಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Heavy Rain

ಬೆಂಗಳೂರು, ಜು.8- ಕಳೆದ ಎರಡು ದಿನಗಳಿಂದ ಮಂಗಳೂರು, ಉಡುಪಿ, ಮೂಡಬಿದರೆ, ಕರಾವಳಿ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯ ಆರ್ಭಟ ಇಂದೂ ಕೂಡ ಮುಂದುವರೆದಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಹಲವೆಡೆ ವರುಣ ತನ್ನ ಆರ್ಭಟವನ್ನು ಮುಂದುವರೆಸಿದ್ದಾನೆ. ಬೆಳಗಾವಿ, ಖಾನಾಪುರ ಮುಂತಾದೆಡೆ ಎಡೆಬಿಡದೆ ಸುರಿದ ಮಳೆಗೆ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ.

ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಇಬ್ಬರು, ಮಲೆನಾಡಿನಲ್ಲಿ ಒಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಅತ್ತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ, ವೇದ ಗಂಗಾ, ದೂದಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹ ಹೆಚ್ಚಾಗಿ ಮೂರು ಸೇತುವೆಯು ಮುಳುಗಡೆಯ ಹಂತ ತಲುಪಿವೆ.

ಇತ್ತ ಮಂಗಳೂರು, ಮೂಡಬಿದರೆ, ನೇತ್ರಾವತಿ, ಕುಮಾರ ಧಾರಾ, ಸ್ವರ್ಣಧಾರಾ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಸುಬ್ರಹ್ಮಣ್ಯ, ಸಕಲೇಶಪುರ ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು , ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ.  ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹೊಲ, ಗದ್ದೆಗಳೆಲ್ಲಾ ಜಲಾವೃತಗೊಂಡಿದ್ದು , ಭತ್ತ ನಾಟಿ ಮಾಡಿದ ರೈತರೆಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.

ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಎನ್‍ಡಿಆರ್‍ಎಫ್ ತಂಡ ಮಂಗಳೂರಿಗೆ ಆಗಮಿಸಿದೆ. ಇಂದೂ ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಈಗಾಗಲೇ ಜನಜೀವನ ಅಸ್ತವ್ಯಸ್ತಗೊಂಡಿದ್ದು , ಹಲವೆಡೆ ಸಂಚಾರ , ಅಡಚಣೆ ಉಂಟಾಗಿದೆ. ಕರಾವಳಿಯಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದು , ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೂಡ ನೀಡಲಾಗಿದೆ.

ಇತ್ತ ಶಿವಮೊಗ್ಗ , ಚಿಕ್ಕಮಗಳೂರು ಭಾಗದಲ್ಲೂ ಮಳೆಯ ಆರ್ಭಟ ಮುಂದುವರೆದಿದೆ. ತುಂಗಾ, ಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಕೊಪ್ಪ, ಶೃಂಗೇರಿ, ಮೂಡಿಗೆರೆ, ಕೊಪ್ಪ, ತೀರ್ಥಹಳ್ಳಿ, ಭಾರೀ ಮಳೆಯಾಗುತ್ತಿದ್ದು, ಅದು ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ.

ನಿನ್ನೆ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ತಾಲ್ಲೂಕಿನ ಆಲರ್ತಿ ಕೊಡವು ಗ್ರಾಮದ ಸಂಪರ್ಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು , ಈ ಭಾಗದ ಜನರಿಗೆ ತೀವ್ರ ತೊಂದರೆಯಾಗಿದೆ.  ನಿನ್ನೆ ಮೂಡಬಿದರೆಯಲ್ಲಿ ಅಜ್ಜಿ-ಮೊಮ್ಮಗ ಮಳೆಯ ಆರ್ಭಟಕ್ಕೆ ಬಲಿಯಾಗಿದ್ದು, ಶೃಂಗೇರಿಯ ಗಿಣಿಕಲ್ ಸಮೀಪ ಗೋಣಿ ಬಯಲಿನಲ್ಲಿ ಕೃಷಿಕನೋರ್ವ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದು ಸೇರಿದಂತೆ ಒಟ್ಟಾರೆ ಮೂವರನ್ನು ವರ್ಷಧಾರೆ ಬಲಿ ಪಡೆದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಇನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು , ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ.

Facebook Comments

Sri Raghav

Admin