ವೇತನವಿಲ್ಲದೆ ಬಿಬಿಎಂಪಿ ಪೌರಕಾರ್ಮಿಕ ಆತ್ಮಹತ್ಯೆ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಜು.9- ಆರು ತಿಂಗಳ ವೇತನ ಇಲ್ಲದೆ ಮನನೊಂದು ಬಿಬಿಎಂಪಿ ಪೌರ ಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಅಮಾನತು ಮಾಡಿದ್ದಾರೆ. ಕಳೆದ ಆರು ತಿಂಗಳಿಂದ ವೇತನ ಬಾರದೆ ಹಾಗೂ ಬಯೋಮೆಟ್ರಿಕ್‍ನಲ್ಲಿ ಹೆಸರು ಇಲ್ಲದಿರುವುದರಿಂದ ಮನನೊಂದು ಸುಬ್ರಹ್ಮಣ್ಯ ಎಂಬ ಪೌರ ಕಾರ್ಮಿಕ ವಯ್ಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‍ಲೈನ್ ರಸ್ತೆಯಲ್ಲಿ ಕಳೆದ ರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.12 ವರ್ಷಗಳಿಂದ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಇವರಿಗೆ ಕಳೆದ ಆರು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.  ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಪೂರ್ವವಲಯದ ಆರೋಗ್ಯಾಧಿಕಾರಿ ಉಮಾಶಂಕರ್ ಹಾಗೂ ಎಇಇ ರಾಜು ಅವರನ್ನು ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಸೇವೆಯಿಂದ ಮಾನತುಗೊಳಿಸಿದ್ದಾರೆ.

ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್ ಸಂಪತ್‍ರಾಜ್ ಅವರು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ಪೌರ ಕಾರ್ಮಿಕರ ಹಿತ ಕಾಯದ ಬಿಬಿಎಂಪಿ ಆಡಳಿತ ಇನ್ನು ಜನಸಾಮಾನ್ಯರ ಹಿತ ಕಾಯುತ್ತದೆಯೇ..? ಕಳೆದ ಆರು ತಿಂಗಳಿನಿಂದ ವೇತನ ನೀಡದೆ ಸತಾಯಿಸುತ್ತಿದ್ದರೆ ಆತನ ಕುಟುಂಬ ನಿರ್ವಹಣೆ ಗತಿ ಏನು..? ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಕಿಡಿಕಾರಿದ್ದಾರೆ.

ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದಿಂದ ಪೌರ ಕಾರ್ಮಿಕರು ಮೇಲಿಂದ ಮೇಲೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪಾಲಿಕೆ ಜನಸಾಮಾನ್ಯರ ಹಾಗೂ ಪೌರ ಕಾರ್ಮಿಕರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.

Facebook Comments

Sri Raghav

Admin