ಕೆಪಿಸಿಸಿಗೆ ಗುಂಡೂರಾವ್’ರಿಂದ ಭರ್ಜರಿ ಸರ್ಜರಿ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Dinesh

ಬೆಂಗಳೂರು, ಜು.9- ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪದಗ್ರಹಣ ಸಮಾರಂಭದ ನಂತರ ಕೆಪಿಸಿಸಿಗೆ ಭರ್ಜರಿ ಸರ್ಜರಿ ಮಾಡುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಪಿಸಿಸಿಯನ್ನು ಪುನರ್ ಸಂಘಟಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಿಂದುಳಿದ, ದಲಿತ ಅಥವಾ ಒಕ್ಕಲಿಗರೊಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಪ್ರಸ್ತುತ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷರಾಗಿದ್ದು, ಉತ್ತರ ಕರ್ನಾಟಕ ಭಾಗದ ಈಶ್ವರಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಹಿಂದುಳಿದವರೊಬ್ಬರು ಮತ್ತು ದಲಿತರೊಬ್ಬರು ಸೇರಿದಂತೆ ಇಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಹಿರಿಯ ಕಾಂಗ್ರೆಸಿಗರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ಒತ್ತಡ ತಂದಿದ್ದು, ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೇ ಜು.11ರಂದು ದಿನೇಶ್ ಗುಂಡೂರಾವ್ ಅವರ ಅಧಿಕಾರ ಸ್ವೀಕಾರ ಸಮಾರಂಭವಿದ್ದು, ಇದರ ನಂತರ ಕೆಪಿಸಿಸಿಗೆ ಇಬ್ಬರು ಕಾರ್ಯಾಧ್ಯಕ್ಷರು ಹಾಗೂ ಇನ್ನಿತರೆ ಖಾಲಿ ಇರುವ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ದಿನೇಶ್ ಗುಂಡೂರಾವ್ ಅವರು ಹೈಕಮಾಂಡ್ ವರಿಷ್ಠರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಗೆ ಈಗಾಗಲೇ ಭಾರೀ ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಪಕ್ಷ ಕೂಡ ಭರ್ಜರಿ ಸಿದ್ಧತೆಗಳನ್ನು ನಡೆಸಬೇಕಿದೆ. ದಿನೇಶ್ ಗುಂಡೂರಾವ್ ಅವರು ಕೂಡ ಪಕ್ಷವನ್ನು ಸಜ್ಜುಗೊಳಿಸಿಕೊಂಡು ಚುನಾವಣೆಗೆ ತಯಾರಾಗಬೇಕಿದೆ. ಅದಕ್ಕಾಗಿ ಹೈಕಮಾಂಡ್ ಇವರಿಗೆ ಜಾತಿ ಪ್ರಾತಿನಿಧ್ಯ, ಭೌಗೋಳಿಕ ಆದ್ಯತೆ ಮೇಲೆ ಹೊಸ ಪಡೆಯನ್ನು ನೀಡುವ ಸಾಧ್ಯತೆ ಇದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin