ವಿಧಾನಸಭೆಯಲ್ಲಿ ಹಾಲಿ-ಮಾಜಿ ಸಿಎಂಗಳ ಟಾಕ್ ಫೈಟ್, ಹಳೆ ವಿಷಯಗಳ ಕೆದಕಿ ಕೆಸರೆರಚಾಟ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Kumaraswamy-

ಬೆಂಗಳೂರು- ಸರ್ಕಾರದ ಅವಧಿಯಲ್ಲಿನ ಜೆಡಿಎಸ್-ಬಿಜೆಪಿ ಅಧಿಕಾರ ಹಂಚಿಕೆ ವಿಷಯ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಏರಿದ ಧ್ವನಿಯಲ್ಲಿ ವಾಕ್ಸಮರ ನಡೆದಿದ್ದಲ್ಲದೆ ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಿಸಿತು.
ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಇಂದು ಸಿಎಂ ಉತ್ತರ ನೀಡಿದರು. ನಂತರ ಉತ್ತರಕ್ಕೆ ಸ್ಪಷ್ಟನೆ ಕೇಳುವ ವೇಳೆ ಪ್ರತಿಪಕ್ಷದ ನಾಯಕ ಯಡಿಯೂರಪ್ಪ, ಮಾತಿನ ನಡುವೆ ನಂಬಿಕೆ ದ್ರೋಹ ಎಂಬುದು ಕುಮಾರಸ್ವಾಮಿ ಅವರಲ್ಲಿ ರಕ್ತಗತವಾಗಿದೆ ಎಂದು ತೀವ್ರ ಆರೋಪ ಮಾಡಿದರು.

ಇದರಿಂದ ಕೆರಳಿದ ಎಚ್‍ಡಿಕೆ ಪದೇ ಪದೇ ಈ ಮಾತನ್ನು ಯಡಯೂರಪ್ಪ ಬಳಸುತ್ತಿದ್ದಾರೆ. ಇದು ಸರಿಯಲ್ಲ. ನನ್ನ ಮುಖ್ಯಮಂತ್ರಿ ಮಾಡಿ ಎಂದು ನಾನು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ನನ್ನಗೊಂದು ಸಚಿವ ಸ್ಥಾನ ಕೊಡಿ ಬಿಜೆಪಿ ಬಿಟ್ಟು ಬರುತ್ತೇನೆ ಎಂದು ಯಡಿಯೂರಪ್ಪನವರೇ ನಮ್ಮ ಮನೆಗೆ ಬಾಗಿಲಿಗೆ ಬಂದಿದ್ದರು ಎಂದು ತಿರುಗೇಟು ನೀಡಿದರು. ಇದಕ್ಕೆ ಉತ್ತರ ನೀಡಿದ ಯಡಿಯೂರಪ್ಪ, ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋದವನಲ್ಲ ಮಂತ್ರಿ ಮಾಡಿ ಎಂದು ನಿಮ್ಮ ಮನೆ ಬಾಗಿಲಿಗೂ ಬಂದಿರಲಿಲ್ಲ. ನೀವು ಹೇಳುತ್ತಿರುವುದು ಸುಳ್ಳು ಎಂದು ವಾದಿಸಿದರು.

ನನ್ನ ಮಾತಿನಲ್ಲಿ ಯಾವುದೇ ಅಸಂಬದ್ಧ ಪದಗಳನ್ನು ಬಳಸಿಲ್ಲ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಮತ್ತು ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿರುವುದು ನಿಜ. ಅಧಿಕಾರಕ್ಕಾಗಿ ನಂಬಿಕೆ ದ್ರೋಹ ಮಾಡುವುದು ಅವರ ರಕ್ತಗತವಾಗಿರುವ ಗುಣ ಎಂದು ಪುನರುಚ್ಚರಿಸಿದರು. ೨೦ ತಿಂಗಳು ಉಪಮುಖ್ಯಮಂತ್ರಿಯಾಗಿ ನಾನು ಎಲ್ಲವನ್ನು ಸಹಿಸಿಕೊಂಡಿದ್ದೆ. ಆದರೆ 20 ತಿಂಗಳ ನಂತರ ನನಗೆ ಅಧಿಕಾರ ಬಿಟ್ಟುಕೊಡುವ ವೇಳೆ ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರು ಖಾಸಗಿ ಹೋಟೆಲ್‍ಗೆ ಬಂದು ಷರತ್ತು ಹಾಕಿದರು.

ಮೈತ್ರಿ ಸರ್ಕಾರ ರಚಿಸುವಾಗಲೇ ಇಬ್ಬರ ನಡುವೆ ತಲಾ 20 ತಿಂಗಳ ಹಂಚಿಕೆಯಾಗಿತ್ತು. ಯಾರ್ಯಾರಿಗೆ ಯಾವ ಯಾವ ಖಾತೆ ಎಂದೂ ಕೂಡ ತೀರ್ಮಾನವಾಗಿತ್ತು. ಅವಕಾಶ ತಪ್ಪಿಸುವ ಸಲುವಾಗಿಯೇ ಕುಮಾರಸ್ವಾಮಿ ದೇವೇಗೌಡರು ಷರತ್ತು ಹಾಕಿದ್ದರು ಎಂದು ಆರೋಪಿಸಿದರು. ಪದೇ ಪದೇ ಯಡಿಯೂರಪ್ಪನವರು ನಂಬಿಕೆ ದ್ರೋಹ ಪದ ಬಳಸಿದ್ದರಿಂದ ಸುಸ್ತಾದ ಮುಖ್ಯಮಂತ್ರಿ ಕುಮಾರಸ್ವಾಮಿ, ನನ್ನ ರಕ್ತದ ಗುಣದ ಬಗ್ಗೆ ಮಾತನಾಡುತ್ತೀರ. ನಾನು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ನನಗೆ ದುರದ್ದೇಶವಿದ್ದರೆ ನಿಮ್ಮನ್ನು ಸಚಿವ ಸ್ಥಾನ ನೀಡಿ ಬಿಜೆಪಿಯಿಂದ ಹೊರ ತಂದುಬಿಡಬಹುದಿತ್ತು. ಎಲುಬಿಲ್ಲದ ನಾಲಿಗೆ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ. ನನಗೂ ನಿಮ್ಮ ಹಾಗೆ ಏರಿದ ಧ್ವನಿಯಲ್ಲಿ ಮಾತನಾಡುವುದು ಗೊತ್ತು. ಎಲ್ಲವೂ ಹೇಳಲು ನನಗೂ ಗೊತ್ತಿದೆ. ನಿಮ್ಮ ಮಿತಿಯಲ್ಲಿ ನೀವು ಎಷ್ಟು ಬೇಕೋ ಅಷ್ಟು ಮಾತನಾಡಿ ಎಂದು ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲಿ ಇಬ್ಬರ ನಡುವೆ ಏರು ದ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಅದಕ್ಕೆ ತಕ್ಕಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ವಾಗ್ವಾದಕ್ಕೆ ಇಳಿದರು. ಎಂ.ಪಿ.ರೇಣುಕಾಚಾರ್ಯ, ಅರವಿಂದ ಲಿಂಬಾಳಿ ಸೇರಿಂತೆ ಅನೇಕ ಬಿಜೆಪಿ ಶಾಸಕರು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತರೆ ಸಚಿವರಾದ ಬಂಡೆಪ್ಪ ಕಾಶ್ಯಂಪೂರ್, ಎಸ್.ಆರ್.ಶ್ರೀನಿವಾಸ್, ಪ್ರಿಯಾಂಕ ಖರ್ಗೆ, ಶಾಸಕರಾದ ವಿನೋದ್ ಗೌಡ, ಅಜಯ್ ಸಿಂಗ್ ಅನೇಕರು ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಂತರು.

ಪದೇ ಪದೇ ಎದ್ದು ನಿಲ್ಲುತ್ತಿದ್ದ ರೇಣುಕಾ ಚಾರ್ಯರಿಗೆ ಸಚಿವ ಪ್ರಿಯಾಂಕ ಖರ್ಗೆ ಸುಮ್ಮನೆ ಕೂತ್ಕೊಳ್ರಿ ಎಂದು ಹೇಳಿದಾಗ ಅವರಿಬ್ಬರ ನಡುವೆ ಒಂದು ಸುತ್ತಿನ ಮಾತಿನ ಚಕಮಕಿ ನಡೆಯಿತು. ಇದಕ್ಕೂ ಮುನ್ನ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ, ಜೆಡಿಎಸ್ ಸರ್ಕಾರ ರಚನೆಯಾಗುವ ಮುನ್ನ ನಾನು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ್ ಅವರ ಮನೆಗೆ ತೆರಳಿ ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿದ್ದೆ. ಆದರೆ ಅವರು ತಾವು ದೇವೇಗೌಡರ ಜೊತೆ ಇರುವುದಾಗಿ ನನ್ನನ್ನು ಆಶೀರ್ವದಿಸಿ ಕಳುಹಿಸಿದರು. ಮುಖ್ಯಂತ್ರಿಯಾದ ನಂತರ ಧರ್ಮಸಿಂಗ್ ಅವರ ಮನೆಗೆ ಹೋಗಿದ್ದೆ. ಅವರು ನನ್ನನ್ನು ತಮ್ಮ ಮಗನಂತೆ ಆರ್ಶಿವರ್ದಿಸಿ ಕಳುಹಿಸಿದ್ದರು. ಅವರು ಸಿಎಂ ಆಗಿ ಅಧಿಕಾರ ಕಳೆದುಕೊಂಡ 11 ವರ್ಷಗಳ ನಂತರ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿಗೂ ಮತ್ತು ಅಧಿಕಾರಕ್ಕೂ ತಳುಕು ಹಾಕುವುದು ಸರಿಯಲ್ಲ. ಸಾವಿನಲ್ಲಿ ರಾಜಕಾರಣ ಮಾಡಬಾರದು ಎಂದು ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.

ಸಭಾಧ್ಯಕ್ಷ ರಮೇಶ್‍ಕುಮಾರ್ ಯಡಿಯೂರಪ್ಪ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ತಡೆ ಹಿಡಿಯುವುದಾಗಿ ರೂಲಿಂಗ್ ನೀಡಿದರು. ನಂತರ ಪ್ರತಿಕ್ರಿಯಿಸಿದ ರಮೇಶ್‍ಕುಮಾರ್, ರಾಜಕಾರಣದಲ್ಲಿ ಬಹಳಷ್ಟು ಘಟನೆಗಳು ನಡೆದಿರುತ್ತವೆ. ಅದನ್ನು ಪದೇ ಪದೇ ಪ್ರಸ್ತಾಪಿಸುವುದು ಸರಿಯಲ್ಲ. ವಯಸ್ಸಾದ ಕಾಲದಲ್ಲಿ ಉದ್ವೇಗಕ್ಕೆ ಒಳಗಾಗದೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಚರ್ಚೆ ಮಾಡಿ ಸದನದ ಸಮಯವನ್ನು ಸದುಪಯೋಗ ಮಾಡಲು ಅವಕಾಶ ಮಾಡಿಕೊಡಿ ಎಂದು ಆಡಳಿತ ಮತ್ತು ಪ್ರತಿಪಕ್ಷದ ಶಾಸಕರಲ್ಲಿ ಸಭಾಧ್ಯಕ್ಷರು ಮನವಿ ಮಾಡಿದರು.

Facebook Comments

Sri Raghav

Admin