ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸಲ್ಲ : ಶಾಸಕ ಎಸ್.ಎ.ರವೀಂದ್ರನಾಥ್

ಈ ಸುದ್ದಿಯನ್ನು ಶೇರ್ ಮಾಡಿ

Raveendranath--01
ದಾವಣಗೆರೆ, ಜು.9- ಮುಂದಿನ ಚುನಾವಣೆಗೆ ನಾನು ಕಣಕ್ಕಿಳಿಯುವುದಿಲ್ಲ. ಬೇರೆಯವರನ್ನು ಕಣಕ್ಕಿಳಿಸಲು ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂದು ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದ್ದಾರೆ. ನಗರ ಉತ್ತರ ಕ್ಷೇತ್ರದ ಬಿಜೆಪಿ, ಒಬಿಸಿ ಮೋರ್ಚಾ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಹಾಗೂ ಮೋರ್ಚಾ ಮುಖಂಡರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತ, ಮುಂದಿನ ಚುನಾವಣೆ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದರು.

ಹಲವು ದಶಕಗಳಿಂದ ನನ್ನ ಜತೆಯಲ್ಲಿದ್ದವರು 72 ವರ್ಷವಾದರೂ ನನ್ನನ್ನು ನೋಡುವ ಮನೋಭಾವ ಬದಲಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ತೆರಳಿದ್ದಾಗ ನನಗೆ ಅದರ ಅನುಭವವಾಯಿತು. ಈ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ ಜನತೆ ನನ್ನನ್ನು ಗೆಲ್ಲಿಸಿರುವುದಕ್ಕೆ ಅವರ ಋಣ ತೀರಿಸಲು ಉತ್ತಮ ಕೆಲಸ ಮಾಡುತ್ತೇನೆ. ಚುನಾವಣೆಗೆ ನಿಲ್ಲಲು ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಅವರು ಈಗಿನಿಂದಲೇ ಸಿದ್ಧತೆ ನಡೆಸಬೇಕು. ಬಲಿಷ್ಠ ಯಂತ್ರಗಳಂತೆ ಸಜ್ಜುಗೊಳ್ಳಬೇಕು ಎಂದರು. ರಾಜ್ಯ ಬಿಜೆಪಿ ಈ ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದರೆ 125 ರಿಂದ 130 ಸೀಟು ಬರುತ್ತಿತ್ತೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಹೇಳಿದರು.

ಸಮಾರಂಭದಲ್ಲಿ ಮಾಜಿ ಮುಖ್ಯ ಸಚೇತಕ ಡಾ.ಎಸ್.ಎ.ಶಿವಯೋಗಿಸ್ವಾಮಿ, ಯುವಮೋರ್ಚಾ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಮುಕುಂದಪ್ಪ, ನಾಗರಾಜ್, ಓಂಕಾರಪ್ಪ, ಶಿವಕುಮಾರ್, ಚಂದ್ರಶೇಖರ್, ಜಯಣ್ಣ, ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Facebook Comments

Sri Raghav

Admin