ಮುಂಗಾರು ಮಳೆಗೆ ತತ್ತರಿಸಿದ ಮುಂಬೈ, ರೈಲು ಸಂಚಾರದಲ್ಲಿ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

Mumbai

ಮುಂಬೈ, ಜು.9- ಮುಂಗಾರು ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿಹೋಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಹಾನಗರದ ರಸ್ತೆಗಳು ನದಿಗಳಾಗಿ ಪರಿವರ್ತನೆಗೊಂಡಿದ್ದು, ವಾಹನ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನಿನ್ನೆ ರಾತ್ರಿ ಆರಂಭವಾದ ಮಳೆ ಇಂದು ಮುಂಜಾನೆ ಕೂಡ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಮುಂಬೈ ನಗರದ ವಾಣಿಜ್ಯ ಚಟುವಟಿಕೆ ಸ್ತಬ್ಧಗೊಂಡಿದೆ.

ರಸ್ತೆಗಳಲ್ಲಿ ಆಳುದ್ದ ನೀರು ನಿಂತ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ರೈಲು ಸಂಚಾರವನ್ನು ನಿಲ್ಲಿಸಲಾಗಿದ್ದು, ಜನರು ಮನೆಯಿಂದ ಹೊರಬರಲಾರದೆ ಪರಿತಪಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಕಚೇರಿಗಳು ಎಂದಿನಂತೆ ಕಾರ್ಯಭಾರ ನಡೆಸುತ್ತಿದ್ದರೂ ನೌಕರರು ಆಫೀಸಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಲ್ಲ ಕಚೇರಿಗಳೂ ಬಿಕೋ ಎನ್ನುತ್ತಿವೆ.

ಸಬರ್‍ಬನ್ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅನ್ಯ ಮಾರ್ಗಗಳಲ್ಲಿ ನಿಯಮಿತ ವೇಗದಲ್ಲಿ ರೈಲು ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಥಾಣೆ ಜಿಲ್ಲೆಯ ನೀರಾ ರಸ್ತೆ, ನಲ್ಲಸೋಪಾರ ಮತ್ತು ವಾಸೈ ಪ್ರದೇಶಗಳಲ್ಲಿ ಭಾರೀ ಅನಾಹುತ ಸಂಭವಿಸಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ವಾತಾವರಣ ಹದಗೆಟ್ಟಿದ್ದರೂ ಎಂದಿನಂತೆ ವಿಮಾನ ಸಂಚಾರ ಆರಂಭವಾಗಿದೆ. ಆದರೆ, ಎಲ್ಲ ವಿಮಾನಗಳಿಗೂ ಮುನ್ನೆಚ್ಚರಿಕೆ ವಹಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆ ನಾಳೆವರೆಗೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

Facebook Comments

Sri Raghav

Admin