BREAKING : ನಿರ್ಭಯ ಪ್ರಕರಣದ ಆರೋಪಿಗಳ ಮರಣದಂಡನೆ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Nirbhaya--01

ನವದೆಹಲಿ,ಜು.9-ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಮೂಲಕ ಕಾಮುಕರಿಗೆ ಉಳಿಗಾಲವಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿ ಆರ್.ಭಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಆರೋಪಿಗಳಿಗೆ ಮರಣದಂಡನೆ ನೀಡುವುದೇ ಸರಿಯಾದ ಶಿಕ್ಷೆ ಎಂದು ತೀರ್ಪು ಪ್ರಕಟಿಸಿ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಾಲಯದ ಈ ತೀರ್ಪಿನಿಂದ ಪ್ರಮುಖ ಆರೋಪಿಗಳಾದ ಮುಖೇಶ್(29), ಪವನ್ ಗುಪ್ತ(22), ವಿನಯ್ ಶರ್ಮ(23) ಕೊರಳಿಗೆ ನೇಣು ಬೀಳುವುದು ಖಚಿತವಾಗಿದೆ.
ಮುಖೇಶ್ , ಪವನ್‍ಗುಪ್ತ ಮತ್ತು ವಿನಯ್ ಶರ್ಮ ತಮಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪ್ರಕರಣದ ಮತ್ತೋರ್ವ ಆರೋಪಿ ಅಕ್ಷಯ್ ಕುಮಾರ್ ಸಿಂಗ್ ಮಾತ್ರ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರಲಿಲ್ಲ.
ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ನಿರ್ಭಯದ ಪೋಷಕರು ಹಾಗೂ ವಿವಿಧ ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕುಗಳ ಹೋರಾಟಗಾರರು, ಮಹಿಳಾ ಹೋರಾಟಗಾರರು ನ್ಯಾಯಾಲಯದ ತೀರ್ಪಿಗೆ ಸ್ವಾಗತಿಸಿದ್ದಾರೆ. ಇದೊಂದು ಅತ್ಯಂತ ಹೇಯ ಕೃತ್ಯ. ಆರೋಪಿಗಳಿಗೆ ಕೆಳಹಂತದ ನ್ಯಾಯಾಲಯ ಹಾಗೂ ಸುಪ್ರೀಂಕೋರ್ಟ್ ನೀಡಿರುವ ಶಿಕ್ಷೆ ಸರಿಯಾಗಿದೆ. ಪೈಶಾಚಿಕ ಕೃತ್ಯ ಎಸಗಿರುವವರು ನಾಗರಿಕ ಸಮಾಜದಲ್ಲಿ ಬಾಳಲು ಅನರ್ಹರು ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಏನಿದು ಪ್ರಕರಣ:
ಅಂದು 2012 ಡಿಸೆಂಬರ್ 6. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅರೆವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ನಿರ್ಭಯ ರಾತ್ರಿ ತನ್ನ ಸ್ನೇಹಿತನೊಂದಿಗೆ ಖಾಸಗಿ ಬಸ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಬಸ್ ಮುಂದೆ ಹೋಗುತ್ತಿದ್ದಂತೆ ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಆರು ಮಂದಿ ಕಾಮುಕರ ತಂಡ ನಿರ್ಭಯಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಬಸ್‍ನಿಂದ ಆಚೆ ತಳ್ಳಿ ಪರಾರಿಯಾಗಿದ್ದರು. ಮರುದಿನ ನಿರ್ಭಯಳ ಸ್ನೇಹಿತ ದೆಹಲಿಯ ಠಾಣೆಗೆ ದೂರು ನೀಡುತ್ತಿದ್ದಂತೆ ಇಡೀ ರಾಷ್ಟ್ರವೇ ಈ ಘಟನೆಯನ್ನು ಖಂಡಿಸಿ, ದೇಶಾದ್ಯಂತ ಚಳುವಳಿ, ಹೋರಾಟಗಳು ನಡೆದವು.

ಜನರ ಆಕ್ರೋಶ ಎಷ್ಟರ ಮಟ್ಟಿಗೆ ತೀವ್ರವಾಗಿತ್ತು ಎಂದರೆ ಅಂದಿನ ಯುಪಿಎ ಸರ್ಕಾರವೇ ಈ ಘಟನೆಯಿಂದ ವಿಚಲಿತಗೊಂಡಿತ್ತು. ಅಂತಿಮವಾಗಿ ಆರೋಪಿಗಳನ್ನು ಬಂಧಿಸಲಾಯಿತು.  ಅತ್ಯಾಚಾರಕ್ಕೆ ಒಳಗಾಗಿದ್ದ ನಿರ್ಭಯಳನ್ನು ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ದೇಹದ ಅಂಗಾಂಗಗಳು ಹೆಚ್ಚಿನ ಊನವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಯಿತು. ಸಾವು-ಬದುಕಿನ ನಡುವೆ ಹಲವು ದಿನಗಳ ಹೋರಾಟ ನಡೆಸಿದರೂ ನಿರ್ಭಯ ಬದುಕುಳಿಯಲಿಲ್ಲ. ಕೊನೆಗೆ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಅತ್ಯಾಚಾರಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಶಿಕ್ಷೆ ನೀಡುವ ಸಲುವಾಗಿ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಿತು.

ನಿರ್ಭಯಳ ಹೆಸರಿನಲ್ಲಿ ಕೇಂದ್ರ ಸರ್ಕಾರ ಯೋಜನೆಯೊಂದನ್ನು ಆರಂಭಿಸಿದ್ದು , ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ. ಈ ಪ್ರಕರಣದ ಆರು ಆರೋಪಿಗಳಲ್ಲಿ ಓರ್ವ ಆರೋಪಿ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೋರ್ವ ಆರೋಪಿಯನ್ನು ಬಾಲ ಅಪರಾಧ ಗೃಹ ಬಂಧನದಲ್ಲಿಡಲಾಗಿದೆ.

Facebook Comments

Sri Raghav

Admin