ಆಡಳಿತ-ಪ್ರತಿಪಕ್ಷ ನಡುವೆ ಮಾತಿನ ಚಕಮಕಿ, ಬಿಜೆಪಿ ಸಭಾತ್ಯಾಗ

ಈ ಸುದ್ದಿಯನ್ನು ಶೇರ್ ಮಾಡಿ

BJP-Session
ಬೆಂಗಳೂರು, ಜು.10-ವಿಧಾನಪರಿಷತ್ ಸಭಾಪತಿ ಚುನಾವಣೆ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಇಂದು ಮತ್ತೆ ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ ನಡೆದು ಸರ್ಕಾರದ ಉತ್ತರದಿಂದ ತೃಪ್ತರಾಗದ ಬಿಜೆಪಿಯವರು ಸಭಾತ್ಯಾಗ ನಡೆಸಿದ ಘಟನೆ ನಡೆಯಿತು.  ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿಷಯ ಪ್ರಸ್ತಾಪಿಸಿ, ಈ ಅಧಿವೇಶನ ಮುಗಿಯುವುದರೊಳಗೆ ಸಭಾಪತಿ ಚುನಾವಣೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣಭೈರೇಗೌಡ ಪ್ರತಿಪಾದಿಸಿದ್ದರು. ಸಭಾಪತಿ ಚುನಾವಣೆಗೆ 3 ದಿನಗಳ ಮುನ್ನ ಅಧಿಸೂಚನೆ ಹೊರಡಿಸಬೇಕು. ಮೊದಲು ರಾಜ್ಯಪಾಲರಿಗೆ ಪತ್ರ ಬರೆಯಬೇಕು, 12 ರಂದು ಅಧಿವೇಶನ ಮುಗಿಯಲಿದೆ. ಹಾಗಾದರೆ ಚುನಾವಣೆ ಯಾವಾಗ ನಡೆಸುವಿರಿ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸದಸ್ಯರು ಯಾವ ನಿಯಮದಡಿ ಚರ್ಚೆಗೆ ಅವಕಾಶ ನೀಡುತ್ತಿದ್ದೀರಿ. ಶೂನ್ಯವೇಳೆಯಲ್ಲಿ ತೆಗೆದುಕೊಳ್ಳುತ್ತಿದ್ದಿರೋ, ಗಮನ ಸೆಳೆಯುವ ಪ್ರಶ್ನೆಯೋ ಅಥವಾ ಸದಸ್ಯರು ವಿಷಯ ಪ್ರಸ್ತಾಪಿಸಿ ನೋಟೀಸ್ ನೀಡಿದ್ದಾರೆಯೇ? ಎಂದರು. ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಉತ್ತರ ನೀಡಿದ್ದಾರೆ. ಮತ್ತೆ ಇದೇ ವಿಷಯ ಪ್ರಸ್ತಾಪಿಸುವುದು ಸರಿಯೇ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.ಆಯನೂರು ಮಂಜುನಾಥ್ ಪರವಾಗಿ ಬಿಜೆಪಿ ಸದಸ್ಯರು ನಿಂತರೆ ರೇವಣ್ಣ ಅವರಿಗೆ ಜೆಡಿಎಸ್ ಸದಸ್ಯರು ಬೆಂಬಲಕ್ಕೆ ನಿಂತರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು, ಈ ಅಧಿವೇಶನ ಮುಗಿಯುವುದ ರೊಳಗೆ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಸಚಿವರ ಉತ್ತರಕ್ಕೆ ನಾವು ಬೆಂಬಲ ಸೂಚಿಸಿದ್ದೆವು. ಒಂದು ಬಾರಿ ಈ ಸದನಕ್ಕೆ ಉತ್ತರ ನೀಡಿದಾಗ ಅದು ಕಾನೂನಾಗುತ್ತದೆ. ಇದೇ ಒಂದು ವೇಳೆ ಉಲ್ಲಂಘನೆಯಾದರೆ ಹಕ್ಕುಚ್ಯುತಿ ಮಂಡಿಸಲು ಅವಕಾಶವಿರುತ್ತದೆ. ಸಚಿವರ ವಿರುದ್ಧ ಹಕ್ಕು ಚ್ಯುತಿಯಾದರೆ ಇದಕ್ಕೆ ಯಾರು ಹೊಣೆ ಎಂದರು.

ನಿಮ್ಮ ಬಳಿ ಬಹುಮತವಿದೆ ಆದರೂ ಚುನಾವಣೆ ನಡೆಸಲು ಏಕೆ ಮೀನಾಮೇಷ ಎಣಿಸುತ್ತಿದ್ದೀರಿ. ಅಧಿವೇಶನ ಮುಗಿಯು ವುದರೊಳಗೆ ಚುನಾವಣೆ ಎಂದು ಹೇಳಿ ಈಗ ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ. ಮೊದಲು ಚುನಾವಣಾ ದಿನಾಂಕ ಯಾವಾಗ ಪ್ರಕಟಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಭೈರೇಗೌಡ, ಅಧಿವೇಶನ ಮುಗಿಯುವುದರೊಳಗೆ ಎಂದರೆ ಒಂದು ಬಾರಿ ಸಭಾಪತಿ ಯವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಹೇಳುವುದಕ್ಕೂ… ಅಧಿವೇಶನ ಮುಕ್ತಾಯವಾಗಿದೆ ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. 2008ರಲ್ಲಿ ಅಂದು ತಿಪ್ಪಣ್ಣನವರು ಹಂಗಾಮಿ ಸಭಾಪತಿಯಾಗಿದ್ದ ವೇಳೆ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಧಿವೇಶನ ಮುಗಿಯುವುದರೊಳಗೆ ಎಂದರೆ ಇಂತಹದ್ದೇ ದಿನಾಂಕದಂದು ಮಾಡಬೇಕೆಂದೇನೂ ಇಲ್ಲ. ಸಭಾಪತಿಯವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ರಾಜ್ಯ ಪಾಲರು ಅಧಿವೇಶನ ಮುಕ್ತಾಯವಾಗಿದೆ ಎಂದು ಹೇಳುತ್ತಾರೆ. ಇದು 135ನೇ ಅಧಿವೇಶನ.

ಒಂದು ವೇಳೆ 136 ನೇ ಅಧಿವೇಶನ ಪ್ರಾರಂಭವಾದ ಸಂದರ್ಭದಲ್ಲಿ ಹಂಗಾಮಿ ಸಭಾಪತಿಗಳನ್ನೇ ಮುಂದುವರೆಸಿದರೆ ಅವರ ಹಕ್ಕುಚ್ಯುತಿಯಾಗುತ್ತದೆ. ಆಗ ವಿರೋಧ ಪಕ್ಷದವರು ಹಕ್ಕುಚ್ಯುತಿ ಮಂಡಿಸಲು ಸ್ವತಂತ್ರರು. ಅದಕ್ಕೆ ನಾನು ಇಲ್ಲವೆ ಸರ್ಕಾರ ಹೊಣೆಯಾಗುತ್ತದೆ ಎಂದರು. ಶುಕ್ರವಾರ ನಡೆದ ಚರ್ಚೆ ಸಂದರ್ಭದಲ್ಲಿ ನಾನು ಸ್ಪಷ್ಟವಾಗಿ ಉತ್ತರಿಸಿದ್ದೇನೆ. ಸರ್ಕಾರ ಎಲ್ಲಿಯೂ ಪಲಾಯನ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಮುಂದೂಡಬೇಕಾದ ಪ್ರಮೇಯವೂ ಇಲ್ಲ. ಚುನಾವಣೆ ನಡೆಸಲು ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ಹೇಳಿದರು.

ಆಗ ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದರು. ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸರ್ಕಾರದ ಬಳಿ ಬಹುಮತವಿದ್ದರೂ ಚುನಾವಣೆ ನಡೆಸಲು ಮೀನಾಮೇಷ ಎಣಿಸುತ್ತಿದೆ. ನಿಮ್ಮ ಆಂತರಿಕ ಸಮಸ್ಯೆಯಿಂದಾಗಿ ಸಭಾಪತಿ ಚುನಾವಣೆಯನ್ನು ಏಕೆ ನಡೆಸುತ್ತಿಲ್ಲ. ಸಂವಿಧಾನ ತಿದ್ದುಪಡಿ ಮಾಡಲು ಹೊರಟಿದ್ದ ನಿಮ್ಮಿಂದ ನಾವು ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ. ತಾಕತ್ತಿದ್ದರೆ ಮೊದಲು ಕಾನೂನು ಪುಸ್ತಕ ಓದಿಕೊಂಡು ಬನ್ನಿ. ನೀವು ಹೇಳಿದಂತೆ ಮಾಡಬೇಕೆಂಬ ನಿಯಮವಿಲ್ಲ.ಚುನಾವಣೆ ನಡೆಸಲು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವರು ತಿರುಗೇಟು ನೀಡಿದರು. ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin