ಕೃಷಿ ಪಂಪ್‍ಸೆಟ್‍ಗಳ ಆರ್’ಆರ್ ಸಂಖ್ಯೆ ಶುಲ್ಕ ರದ್ದು..?

ಈ ಸುದ್ದಿಯನ್ನು ಶೇರ್ ಮಾಡಿ

CM-HD-Kumaraswamy
ಬೆಂಗಳೂರು, ಜು.10- ಕೃಷಿ ಪಂಪ್‍ಸೆಟ್‍ಗಳಿಗೆ ಆರ್‍ಆರ್ ಸಂಖ್ಯೆ ಪಡೆಯಲು ಪಾವತಿಸಬೇಕಾಗಿರುವ 10ಸಾವಿರ ರೂ.ಗಳ ಶುಲ್ಕವನ್ನು ಕೈಬಿಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಸುರಪುರ ಕ್ಷೇತ್ರದ ಶಾಸಕ ನರಸಿಂಹನಾಯಕ್ ಅವರು ಪ್ರಶ್ನೆ ಕೇಳಿ, ರೈತರ ಪಂಪ್‍ಸೆಂಟ್‍ಗಳಿಗೆ ವಿದ್ಯುತ್ ನೋಂದಣಿ ಶುಲ್ಕ( ಆರ್‍ಆರ್‍ನಂಬರ್) ಪಡೆಯಬೇಕಾದರೆ 10 ಸಾವಿರ ಸರ್ವೀಸ್ ಚಾರ್ಜ್ ಪಡೆಯಲಾಗುತ್ತಿದೆ. ಇದು ರೈತರಿಗೆ ಹೊರೆಯಾಗುತ್ತಿದೆ. ಅದನ್ನು ರದ್ದು ಮಾಡಿ ಎಂದು ಮನವಿ ಮಾಡಿದರು.
ಅದಕ್ಕೆ ಉತ್ತರ ನೀಡಿದ ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಅವರು, ಹೊಸ ಅಥವಾ ಅನಧಿಕೃತ ಪಂಪ್‍ಸೆಟ್‍ಗಳೆಂಬ ಭೇದ-ಭಾವ ಮಾಡದೆ ಎಲ್ಲಾ ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್‍ಸಂಪರ್ಕ ಕಲ್ಪಿಸಲು ಮೂಲಸೌಕರ್ಯ ರಚನಾ ಶುಲ್ಕ ಪಡೆಯಲಾಗುತ್ತಿದೆ. ನೀರಾವರಿ ಪಂಪ್‍ಸೆಟ್‍ಗಳಿಗೆ ಮೂಲಸೌಕರ್ಯ ಒದಗಿಸಿ ಸಂಪರ್ಕ ಕಲ್ಪಿಸಲು ಸರಾಸರಿ ಒಂದು ಲಕ್ಷ ವೆಚ್ಚವಾಗುತ್ತಿದೆ. ಇಷ್ಟು ದೊಡ್ಡ ಮೊತ್ತ ಭರಿಸಲು ರೈತರಿಗೆ ಕಷ್ಟವಾಗುತ್ತಿದೆ. ಅದಕ್ಕಾಗಿ 10 ಸಾವಿರ ಶುಲ್ಕವನ್ನು ನಿಗದಿ ಮಾಡಲಾಗಿದೆ. ಸದ್ಯಕ್ಕೆ ಈ ಶುಲ್ಕವನ್ನು ರದ್ದುಪಡಿಸುವ ಪ್ರಸ್ತಾವನೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಶಾಸಕ ನರಸಿಂಹನಾಯಕ್ ಮಾತನಾಡಿ, 10ಸಾವಿರ ಶುಲ್ಕ ಭರಿಸಲು ರೈತರಿಗೆ ಕಷ್ಟವಾಗುತ್ತಿದೆ. ಇದನ್ನು ರದ್ದು ಮಾಡಿ ರೈತರ ನೆರವಿಗೆ ಬನ್ನಿ ಎಂದು ಮನವಿ ಮಾಡಿದರು. ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳನ್ನು ತಂತಿಗಳನ್ನು ತೆಗೆದು ಹೊಸದಾಗಿ ಕಂಬ ಮತ್ತು ತಂತಿ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ಗುಲ್ಬರ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮುಡ ಅವರು ಪ್ರಶ್ನೆ ಕೇಳಿ ಗುಲ್ಬರ್ಗ ಗ್ರಾಮೀಣ ಕ್ಷೇತ್ರಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು, ತಂತಿಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಬದಲಾಯಿಸಿ, ಇಲ್ಲವಾದರೆ ಜನ, ಜಾನುವಾರುಗಳಿಗೆ ಅಪಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಸವಿಸ್ತಾರ ಉತ್ತರ ನೀಡಿದ ಸಿಎಂ, ಗುಲ್ಬರ್ಗ ಜಿಲ್ಲೆಯಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬ ಮತ್ತು ತಂತಿ ಬದಲಾವಣೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

Facebook Comments