ಚಿಕ್ಕಮಗಳೂರು ಇಂಜಿನಿಯರಿಂಗ್ ಕಾಲೇಜು ವಿಳಂಬಕ್ಕೆ ಶಾಸಕ ಸಿ.ಟಿ.ರವಿ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

CT-Ravi-Session
ಬೆಂಗಳೂರು, ಜು.10- ಚಿಕ್ಕಮಗಳೂರು ಇಂಜನಿಯರಿಂಗ್ ಕಾಲೇಜಿಗೆ ಕಟ್ಟಡ ಹಾಗೂ ಇತರ ಮೂಲಸೌಕರ್ಯಗಳನ್ನು ಕಲ್ಪಿಸಲು ನಬಾರ್ಡ್‍ನಿಂದ ಅನುದಾನ ಸಿಕ್ಕ ನಂತರ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ವಿಶೇಷ ಅನುದಾನ ಪಡೆಯಲು ಪ್ರಯತ್ನಿಸ ಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2012ರಲ್ಲಿ ಸಿ.ಟಿ.ರವಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ 4 ಇಂಜನಿ ಯರಿಂಗ್ ಕಾಲೇಜುಗಳನ್ನು ಮಂಜೂರು ಮಾಡಿದ್ದರು. ಆದರೆ, ಆ ಸಂದರ್ಭದಲ್ಲಿ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳಿಗೆ ಹಣ ಒದಗಿಸಿರಲಿಲ್ಲ. ಹೀಗಾಗಿ ಕಾಲೇಜುಗಳು ಪ್ರಾರಂಭವಾಗಿಲ್ಲ. ಚಿಕ್ಕಮಗಳೂರು ಇಂಜನಿಯರಿಂಗ್ ಕಾಲೇಜು ಕಟ್ಟಡಕ್ಕೆ ಇತರೆ ಸೌಲಭ್ಯಗಳನ್ನು ಒದಗಿಸುವವರೆಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ವಿವಿಯ ಮೇಲೆ ಆದಾಯ ತೆರಿಗೆ ದಾಳಿ ನಡೆದು 440ಕೋಟಿ ಜಪ್ತಿಯಾಗಿದೆ. ಹೀಗಾಗಿ ಚಿಕ್ಕಮಗಳೂರು ಇಂಜನಿಯರಿಂಗ್ ಕಾಲೇಜಿಗೆ ಮೂಲಸೌಲಭ್ಯ ಒದಗಿಸಲು ವಿಳಂಬವಾಗಿದೆ. ಆದರೂ ಪ್ರಯತ್ನ ಕೈ ಬಿಡದೆ ನಬಾರ್ಡ್‍ನಿಂದ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮತಿ ಸಿಕ್ಕ ಕೂಡಲೇ ಕಾಲೇಜಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು.

ಆದರೆ, ಇದರಿಂದ ತೃಪ್ತರಾಗದ ಸಿ.ಟಿ.ರವಿ ಅವರು ಕಾಲಮಿತಿಯನ್ನು ತಿಳಿಸುವಂತೆ ಪಟ್ಟು ಹಿಡಿದರು. ಆರು ವರ್ಷವಾದರೂ ಕಾಲೇಜಿನ ಕಟ್ಟಡ ನಿರ್ಮಾಣವಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಗೆ ಇಂಜನಿಯರಿಂಗ್ ಕಾಲೇಜು ಇರಲಿಲ್ಲ. ಹಾಗಾಗಿ ನಾನು ಸಚಿವನಾಗಿದ್ದಾಗ ಕಾಲೇಜು ಮಂಜೂರು ಮಾಡಿದೆ. ಆದರೆ ಆಡಳಿತ ಪಕ್ಷಗಳು ಬದಲಾದರೂ ಸರ್ಕಾರ ನಿರಂತರ ಆರು ವರ್ಷ ಪೂರೈಸಿದರೂ ವಿಳಂಬವಾಗಿದ್ದೇಕ್ಕೆ ಎಂದು ಪದೇ ಪದೇ ಕೇಳಿದರು. ಕಾಲೇಜು ಮಂಜೂರು ಮಾಡುವಾಗಲೇ ಅಗತ್ಯ ಅನುದಾನ ನೀಡದೇ ಇರುವುದರಿಂದ ತೊಂದರೆ ಎದುರಾಗಿದೆ. ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ವಿಶೇಷ ಅನುದಾನ ಪಡೆಯಲು ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಆಗಲೂ ಪಟ್ಟು ಬಿಡದ ಸಿ.ಟಿ.ರವಿ, ಸ್ಪಷ್ಟವಾಗಿ ಕಾಲಮಿತಿಯನ್ನು ಹೇಳಿ ಎಂದು ಒತ್ತಾಯಿಸಿದಾಗ, ಸಭಾಧ್ಯಕ್ಷ ಸ್ಥಾನದಲ್ಲಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು ಸಚಿವರು ಮತ್ತು ಶಾಸಕರು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು. ಪದವಿ ಪೂರ್ವ ಕಾಲೇಜುಗಳಲ್ಲಿ ಕಟ್ಟಡ ಹಾಗೂ ಮೂಲಸೌಲಭ್ಯಕ್ಕಾಗಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಭರವಸೆ ನೀಡಿದರು.

ಬೈಲಹೊಂಗಲ ಶಾಸಕ ಕೌಜಲಗಿ ಮಹಂತೇಶ್ ಅವರು, ಬೆಳಗಾವಿ ಜಿಲ್ಲೆ ಬೈಲ ಹೊಂಗಲ ಕ್ಷೇತ್ರದಲ್ಲಿರುವ 7 ಕಾಲೇಜುಗಳಿಗೆ ಕೊಠಡಿ ಮತ್ತು ಶೌಚಾಲಯಗಳ ಕೊರತೆ ಇದೆ. ಈ ಹಿಂದಿನ ಸರ್ಕಾರ ನಿಗದಿ ಪಡಿಸಿದ ಅನುದಾನವನ್ನು ಸರಿಯಾದ ಕಾಲಕ್ಕೆ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಡಿಸಿದರು. ಆಗ ವಿವರ ನೀಡಿದ ಸಚಿವ ಮಹೇಶ್ ಅವರು, ಪ್ರತಿ ಕಾಲೇಜಿಗೂ ಬಿಡುಗಡೆ ಯಾಗಿರುವ ಅನುದಾನದ ಲೆಕ್ಕ ಹೇಳಿ ಶೀಘ್ರವೇ ಹೆಚ್ಚುವರಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin