ಭದ್ರಾ ಮೇಲ್ದಂಡೆ ಯೋಜನೆ ಭೂಮಿ ನೀಡಿದ ರೈತರಿಗೆ ಶೇ.100ರಷ್ಟು ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Shivakumar session

ಬೆಂಗಳೂರು, ಜು.10- ಭದ್ರಾ ಮೇಲ್ದಂಡೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಶೇ.100ರಷ್ಟು ಪರಿಹಾರ ಧನವನ್ನು ಹೆಚ್ಚಳ ಮಾಡಿ ಆಧಿಸೂಚನೆ ಹೊರಡಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.  ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಪರಿಹಾರ ಧನ ವಿಳಂಬವಾಗಿರುವುದಕ್ಕೆ ಶೇ.12ರಷ್ಟು ಬಡ್ಡಿ ಸೇರಿ ಪಾವತಿ ಮಾಡಲಾಗಿದೆ. ಆದರೂ ಪರಿಹಾರ ಧನ ಕಡಿಮೆಯಾಗಿದೆ ಎಂಬುದು ಶಾಸಕರ ಅಭಿಪ್ರಾಯವಾಗಿದ್ದು, ಮಾನವೀಯತೆ ನೆಲೆಯಲ್ಲಿ ಪರಿಹಾರ ಹೆಚ್ಚು ನೀಡಲು ಸಾಧ್ಯವಿಲ್ಲ. ಆದರೆ, ಕೃಷ್ಣಾಮೇಲ್ದಂಡೆ ಯೋಜನೆಯಡಿ ಎಕ್ಸ್‍ಗ್ರೇಷಿಯಾದಡಿ ಏನಾದರೂ ಸಹಾಯ ಮಾಡಬಹುದೇ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಈಗಾಗಲೇ ಪ್ರಾರಂಭವಾಗಿರುವ ಎತ್ತಿನಹೊಳೆ ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇದೇ ರೀತಿ ರಾಜ್ಯದ ಹಲವೆಡೆ ಹಲವು ರೀತಿಯ ಸಮಸ್ಯೆಗಳು ಇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಗೂಳಿಹಟ್ಟಿ ಶೇಖರ್, ಕೃಷ್ಣಾ ಮೇಲ್ದಂಡೆ ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಹೆಚ್ಚಿನ ಪರಿಹಾರವನ್ನು ಮಾನವೀಯತೆ ಮೇರೆಗೆ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಆಕ್ಷೇಪ ವೆತ್ತಿದ ಜೆಡಿಎಸ್‍ನ ಶಾಸಕ ಶಿವಲಿಂಗೇಗೌಡ ಅವರು, ಶೂನ್ಯವೇಳೆಯಲ್ಲಿ ದಿನದ 24 ಗಂಟೆ ಅವಧಿಯಲ್ಲಿ ನಡೆದ ಘಟನೆಗಳ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಸಾರ್ವಜನಿಕ ಮನವಿಗಳನ್ನು ಪ್ರಸ್ತಾಪಿಸಬಹುದು ಎಂಬ ತಿಳುವಳಿಕೆಯನ್ನು ಶಾಸಕರಿಗೆ ಕೊಡಿ ಎಂದು ಆಗ್ರಹಿಸಿದರು. ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು, ಈ ವಿಚಾರವನ್ನು ಸಭಾಧ್ಯಕ್ಷರ ಗಮನಕ್ಕೆ ತರುವುದಾಗಿ ಹೇಳಿದರು.

Facebook Comments

Sri Raghav

Admin