ಪ್ರಿಯತಮೆಗಾಗಿ ಯು ಟ್ಯೂಬ್ ನೋಡಿ ತಂದೆ-ತಾಯಿಯ ಕೊಲ್ಲಲೆತ್ನಿಸಿದ ಎಂಜಿನಿಯರ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

crime

ಬೆಂಗಳೂರು, ಜು.10- ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ಮನೆಯವರು ಒಪ್ಪಲಿಲ್ಲ ಎಂದು ನಾಲ್ಕು ಸಲ ಆತ್ಮಹತ್ಯೆಗೆ ಯತ್ನ ನಡೆಸಿ ಬದುಕುಳಿದು ಕೊನೆಗೆ ಯು ಟ್ಯೂಬ್ ನೋಡಿ ತನ್ನ ತಂದೆ-ತಾಯಿಗೆ ಗುಂಡಿಕ್ಕಿ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದ ಮೆಕ್ಯಾನಿಕಲ್ ಎಂಜಿನಿಯರ್‍ನೊಬ್ಬನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಪಾಪರೆಡ್ಡಿಪಾಳ್ಯದ ನಿವಾಸಿ ಶರತ್ (25) ಬಂಧಿತ ಮೆಕ್ಯಾನಿಕಲ್ ಎಂಜಿನಿಯರ್. ಈತನಿಂದ 8.37 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳು ಹಾಗೂ ಒಂದು ನಾಡ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

ಡಿಪ್ಲಮೋ ಇನ್ ಮೆಕ್ಯಾನಿಕಲ್ ಎಂಜಿನಿಯರ್ ಓದಿರುವ ಶರತ್‍ಗೆ ಇತ್ತೀಚೆಗೆ ಯುವತಿಯೊಬ್ಬಳ ಮೇಲೆ ಪ್ರೇಮಾಂಕುರವಾಗಿತ್ತು. ಸ್ವಂತವಾಗಿ ಬಿಜಿನೆಸ್ ಮಾಡಲು ಬಿಡದ ಹಾಗೂ ಪ್ರೀತಿಸುತ್ತಿದ್ದ ಯುವತಿಯನ್ನು ವಿವಾಹವಾಗಲು ತಂದೆ-ತಾಯಿ ಒಪ್ಪದ ಹಿನ್ನೆಲೆಯಲ್ಲಿ ಅವರನ್ನು ಸಾಯಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.  ಈ ವಿಷಯ ತಿಳಿದ ಪೋಷಕರು ಆತನನ್ನು ಮನೆಯಿಂದ ಹೊರಹಾಕಿದ್ದರು. ಆನಂತರ ಶರತ್ ಮೋಜಿನ ಜೀವನ ನಡೆಸಬೇಕೆಂಬ ಉದ್ದೇಶದಿಂದ ವಾಹನ ಕಳವು ದಂಧೆಗೆ ಇಳಿದಿದ್ದ. ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮೋಜಿನ ಜೀವನ ಸಾಗಿಸುತ್ತಿದ್ದ ಶರತ್‍ಗೆ ಈ ನಡುವೆ ಜೀವನದಲ್ಲಿ ಜಿಗುಪ್ಸೆ ಉಂಟಾಯಿತು.

ಈ ಹಿಂದೆ ಎರಡು ಬಾರಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಅದು ವಿಫಲವಾದಾಗ ಮತ್ತೆ ಆರು ತಿಂಗಳ ನಂತರ ತನ್ನ ಕಾರಿನಲ್ಲಿ ಮಾಗಡಿಗೆ ತೆರಳಿ ಸ್ವಯಂ ಅಪಘಾತ ಮಾಡಿಕೊಂಡಿದ್ದ. ಆಗಲೂ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆದ. ನಂತರ ದಾಳಿಂಬೆ ಗಿಡಕ್ಕೆ ಹೊಡೆಯುವ ರಾಸಾಯನಿಕ ಪೌಡರ್ ಸೇವಿಸಿ ಪ್ರಾಣ ತ್ಯಜಿಸಲು ಮುಂದಾಗಿದ್ದ. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬ ಗಾದೆ ಮಾತಿನಂತೆ ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲ ಯತ್ನಗಳೂ ವಿಫಲವಾದಾಗ ಪ್ರತಿಯೊಂದು ವಿಷಯದಲ್ಲೂ ತಂದೆ-ತಾಯಿ ತನ್ನ ವಿರುದ್ಧ ನಡೆದುಕೊಳ್ಳುತ್ತಾರೆ ಎಂದು ಬೇಸರಗೊಂಡ ಶರತ್, ಯು ಟ್ಯೂಬ್‍ನಲ್ಲಿ ಯಶಸ್ವಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮಾರ್ಗ ಯಾವುದು ಎಂಬ ಬಗ್ಗೆ ಸರ್ಚ್ ಮಾಡಿದ್ದ. ಯು ಟ್ಯೂಬ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪಿಸ್ತೂಲಿನಿಂದ ಶೂಟ್ ಮಾಡಿಕೊಳ್ಳುವುದೇ ಸೂಕ್ತ ಎಂಬ  ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬಿಹಾರಿಯೊಬ್ಬನಿಂದ ಒಂದು ಪಿಸ್ತೂಲ್ ಖರೀದಿ ಮಾಡಿದ್ದ. ಪಿಸ್ತೂಲು ಖರೀದಿ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವುದು ಶತಸಿದ್ಧ ಎಂದುಕೊಂಡಿದ್ದ ಶರತ್, ಇದಕ್ಕೂ ಮುನ್ನ ನನ್ನ ಪ್ರೀತಿಗೆ ಅಡ್ಡಿಪಡಿಸಿದ ತಂದೆ-ತಾಯಿಯನ್ನು ಮುಗಿಸಿಬಿಡುವ ತೀರ್ಮಾನಕ್ಕೂ ಬಂದಿದ್ದ.

ಒಂದು ದಿನ ತಂದೆ-ತಾಯಿಯನ್ನು ಮುಗಿಸಲೇಬೇಕು ಎಂದು ಪಿಸ್ತೂಲು ಹಿಡಿದು ಅಪ್ಪ-ಅಮ್ಮ ಇದ್ದ ಕಾಮಾಕ್ಷಿಪಾಳ್ಯದಲ್ಲಿನ ಮನೆ ಹತ್ತಿರಕ್ಕೂ ಬಂದಿದ್ದ. ಆದರೆ, ಮನೆ ಮುಂದೆ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಪರಾರಿಯಾಗಿದ್ದ. ಬೈಕ್‍ಗಳನ್ನು ಕಳವು ಮಾಡಿ ತಲೆಮರೆಸಿ ಕೊಂಡು ತಿರುಗುತ್ತಿದ್ದ ಶರತ್, ಕಳೆದ ಭಾನುವಾರ ಕುರುಬರಹಳ್ಳಿ ಸರ್ಕಲ್ ಸಮೀಪ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದ. ನಂತರ ಪೊಲೀಸರು ತೀವ್ರ ವಿಚಾರಣೆ ನಡೆಸಲಾಗಿ ಆತನ ಬಳಿ ಒಂದು ನಾಡ ಪಿಸ್ತೂಲ್, ಎಂಟು ಜೀವಂತ ಗುಂಡುಗಳು ಹಾಗೂ ಎರಡು ಉಪಯೋಗಿಸಿದ ಖಾಲಿ ಗುಂಡುಗಳು ಇದ್ದವು.

ಪಿಸ್ತೂಲಿನ ಬಗ್ಗೆ ವಿಚಾರಿಸಿದಾಗ ತನ್ನ ಪ್ರೀತಿ, ಪ್ರೀತಿಸಿದವಳನ್ನು ಕೈ ಹಿಡಿಯಲು ಒಪ್ಪದ ಪೋಷಕರ ವರ್ತನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದದ್ದು, ಕೊನೆಗೆ ತನ್ನ ಪ್ರೀತಿಗೆ ಒಪ್ಪದ ತಂದೆ-ತಾಯಿಯನ್ನು ಮುಗಿಸಲು ಪಿಸ್ತೂಲು ಖರೀದಿಸಿದ ಮಾಹಿತಿ ಬಗ್ಗೆ ಶರತ್ ಬಾಯ್ಬಿಟ್ಟಿದ್ದಾನೆ. ಬಂಧಿತನಿಂದ 8.37 ಲಕ್ಷ ಮೌಲ್ಯದ 10 ದುಬಾರಿ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಬಸವೇಶ್ವರನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ.  ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣವರ್ ಮಾರ್ಗದರ್ಶನದಲ್ಲಿ ಎಸಿಪಿ ಪರಮೇಶ್ವರ್ ಹೆಗಡೆ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಸೋಮಶೇಖರ್ ಮತ್ತಿತರ ಸಿಬ್ಬಂದಿ ಖತರ್ನಾಕ್ ವಾಹನಗಳ್ಳ ಶರತ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin