ಮಹಿಳಾ ಕ್ರಿಕೆಟರ್ ಹರ್ಮನ್‍ಪ್ರೀತ್ ಕೌರ್’ಗೆ ನೀಡಿದ್ದ ಡಿವೈಎಸ್‍ಪಿ ಶ್ರೇಣಿ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

harman-01

ಚಂಡಿಗಢ, ಜು.10- ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್‍ಗೆ ನೀಡಲಾಗಿದ್ದ ಡಿವೈಎಸ್‍ಪಿ ಶ್ರೇಣಿಯನ್ನು ಪಂಜಾಬ್ ಸರ್ಕಾರ ಹಿಂಪಡೆದಿದೆ. ಕಾರಣ ಹರ್ಮನ್‍ಪ್ರೀತ್ ಕೌರ್ ಅವರ ಪದವಿ ಪ್ರಮಾಣ ಪತ್ರ ನಕಲಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಅವರಿಗೆ ನೀಡಿದ್ದ ಡಿವೈಎಸ್‍ಪಿ ಶ್ರೇಣಿಯನ್ನು ವಾಪಸ್ ತೆಗೆದುಕೊಂಡಿದೆ. ಭಾರತ ಕ್ರಿಕೆಟ್ ತಂಡದ ಟ್ವೆಂಟಿ-20 ಮಹಿಳಾ ತಂಡದ ನಾಯಕಿಯಾಗಿರುವ ಇವರಿಗೆ ಪಂಜಾಬ್ ಸರ್ಕಾರ 2011 ಮಾರ್ಚ್ 1ರಂದು ಕ್ರಿಕೆಟ್‍ನಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಡಿವೈಎಸ್‍ಪಿ ಶ್ರೇಣಿಯನ್ನು ನೀಡಿತ್ತು.

ಈ ವೇಳೆ ಪಂಜಾಬ್ ಸರ್ಕಾರಕ್ಕೆ ಸಲ್ಲಿಸಿದ್ದ ಪದವಿ ಪ್ರಮಾಣ ಪತ್ರವನ್ನು ತನಿಖೆಗೆ ಒಳಪಡಿಸಲಾಗಿತ್ತು. ಉತ್ತರ ಪ್ರದೇಶದ ಮೀರತ್‍ನಲ್ಲಿರುವ ಚೌಧರಿ ಚರಣ್‍ಸಿಂಗ್ ವಿಶ್ವವಿದ್ಯಾನಿಲಯದಲ್ಲಿ ತಾವು ಪದವಿ ಪಡೆದಿದ್ದೇವೆಂದು ಹೇಳಿಕೊಂಡಿದ್ದರು. ಇದನ್ನು ತನಿಖೆಗೊಳಪಡಿಸಿದಾಗ ಹರ್ಮನ್‍ಕೌರ್ ಕೇವಲ 12ನೆ ತರಗತಿ ಓದಿರುವುದು ಬೆಳಕಿಗೆ ಬಂದಿತ್ತು.

ನಿಯಮಗಳ ಪ್ರಕಾರ, 12ನೆ ತರಗತಿ ಓದಿದವರಿಗೆ ಪೊಲೀಸ್ ಹುದ್ದೆಯನ್ನು ನೀಡಬಹುದೇ ಹೊರತು ಡಿವೈಎಸ್‍ಪಿ ಹುದ್ದೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಹಿಂಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಹರ್ಮಿನ್‍ಪ್ರೀತ್ ಕೌರ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಟುವಾಗಿರುವುದರಿಂದ ಅವರು ಭಾರತವನ್ನು ಪ್ರತಿನಿಧಿಸುತ್ತಾರೆ. ನಕಲಿ ಪ್ರಮಾಣ ಪತ್ರ ಹೊಂದುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಹೀಗಾಗಿ ತನಿಖೆಗೆ ಆದೇಶ ನೀಡಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸುವುದಾಗಿ ಸರ್ಕಾರ ಹೇಳಿದೆ.

Facebook Comments

Sri Raghav

Admin