ಹುಷಾರ್…ಎಚ್ಚರಿಕೆವಹಿಸದಿದ್ದರೆ ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಈ ಮಳೆಗಾಲ..!

ಈ ಸುದ್ದಿಯನ್ನು ಶೇರ್ ಮಾಡಿ

Rain-Health

ಮನುಷ್ಯನೂ ಸೇರಿದಂತೆ ಪ್ರಾಣಿಗಳ ಆರೋಗ್ಯದ ಮೇಲೆ ಸ್ವಾಭಾವಿಕವಾಗಿ ಬದಲಾಗುವ ಋತುಗಳು ಮಹತ್ವದ ಪರಿಣಾಮ ಬೀರುತ್ತವೆ. ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ವಾತಾವರಣದ ಆಧಾರದ ಮೇಲೆ ಒಂದು ವರ್ಷವನ್ನು ಆರು ಋತು ಗಳನ್ನಾಗಿ ವಿಭಾಗಿಸಲಾಗಿದೆ. ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ, ಆಹಾರ ವಿಹಾರ, ಆಚಾರ, ಔಷಧಿಗಳ ವಿಚಾರದಲ್ಲಿ ಪ್ರತಿ ಋತುವಿನಲ್ಲೂ ಅನು ಸರಿಸಬೇಕಾದ ಕೇಂದ್ರ ನಿಯಮಗಳನ್ನು ವೈದ್ಯ ಶಾಸ್ತ್ರದಲ್ಲಿ ಋತುಚರ್ಯೆ ಎಂದು ಕರೆಯಲಾಗಿದೆ. ಆರು ಋತುಗಳಲ್ಲಿ ಪ್ರಸ್ತುತ ವರ್ಷಋತು ಪ್ರಾರಂಭವಾಗಿದೆ. ಜೂನ್ ಮೊದಲ ಅಥವಾ ಕೊನೆಯ ವಾರದಿಂದ ಪ್ರಾರಂಭವಾಗಿ ಸೆಪ್ಟಂಬರ್ ತಿಂಗಳ ಕೊನೆ ವಾರದವರೆಗೆ ಈ ಋತು ಶ್ರಾವಣ ಭಾದ್ರಪದ ಮಾಸಗಳ ನ್ನೊಳಗೊಂಡ ಮಳೆಗಾಲ ಆರೋಗ್ಯದ ದೃಷ್ಟಿಯಿಂದ ಇದು ಒಂದು ಬಹು ಮಹತ್ವದ ಕಾಲ. ಗ್ರೀಷ್ಮ ಋತುವಿನ ಬಿಸಿಲಿನ ಝಳ ದಿಂದ ಬೆಂದು ಬಳಲಿ ಕಂಗಾಲಾಗಿದ್ದ ಭೂಮಂಡಲದ ಜೀವರಾಶಿಗೆ ವರ್ಷ ಋತುವಿನ ಮಳೆ-ತಂಪಾದ ಗಾಳಿ, ಹೊಸ ಚೇತನವನ್ನು ತರುತ್ತವೆ.

ಜೀವನುತ್ಸಾಹ ತರುವ ಇದೇ ಮಳೆ ಒಮ್ಮೊಮ್ಮೆ ನರಳಿಸಿ ಬಿಡುತ್ತದೆ. ಬದಲಾಗುವ ವಾತಾವರಣಕ್ಕೂ ಆರೋಗ್ಯಕ್ಕೂ ಎಲ್ಲಿಲ್ಲದ ನಂಟು. ಹೀಗಾಗಿ ವಾತಾವರಣ ಬದಲಾದಂತೆ ದೈಹಿಕ ಚಟುವಟಿಕೆಯಲ್ಲಿ ಒಂದಿಷ್ಟು ಏರುಪೇರು ಕಂಡು ಬರುತ್ತದೆ. ಇದರ ಪರಿಣಾಮ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆ. ಸೋಂಕುಗಳ ಆಕ್ರಮಣ ಈ ಸಮಯದಲ್ಲಿ ಹೆಚ್ಚು. ಮಳೆಗಾಲದಲ್ಲಿ ಸೋಂಕುಗಳ ಪ್ರಸರಣ ವೇಗವಾಗಿ ಆಗುತ್ತದೆ. ಇದು ನೀರು, ಆಹಾರ, ಗಾಳಿ ಮೂಲಕ ದೇಹವನ್ನು ಸೇರುತ್ತದೆ. ಈ ಸಮಯದಲ್ಲಿ ನೀರಿನ ಮೂಲಕ ಹರಡುವ ಕಾಯಿಲೆಗಳೇ ಹೆಚ್ಚು. ಮೂಗು ಹಾಗೂ ಬಾಯಿಯಿಂದ ಹರಡುತ್ತದೆ.

ಆಹಾರ ಮೂಲದಿಂದ ಡಯೇರಿಯಾ, ಕಾಲಾರ ಕಾಣಿಸುತ್ತದೆ. ಬ್ಯಾಕ್ಟೀರಿಯಾ ಹಾಗೂ ವೈರಸ್‌ನಿಂದ ಚರ್ಮದ ತೊಂದರೆ, ನೆಗಡಿ,ಜ್ವರ ಕಾಣಿಸಿಕೊಳ್ಳುತ್ತದೆ. ವಾಂತಿ, ಭೇದಿ, ಟೈಫಾಯಿಡ್ ಜ್ವರ, ಹೆಪಟೈಟಿಸ್ ಎ, ವೈರಾಣು ಜ್ವರ, ಜಾಂಡಿಸ್ ಚಿಕೂನ್‌ಗುನ್ಯಾ ಕಾಣಿಸುತ್ತದೆ. ಕೆಮ್ಮು,ಶೀತ ಬಹುತೇಕ ಎಲ್ಲ ವಯಸ್ಸಿನವರಲ್ಲೂ ಕಾಣಿಸುತ್ತದೆ. 1-6 ವರ್ಷದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿ ಇರುವುದರಿಂದ ಬಹುಬೇಗ ಸೋಂಕು ತಗುಲಬಹುದು.

ಕಲುಷಿತ ನೀರಿನಲ್ಲಿ ವೃದ್ಧಿಯಾಗುವ ಅನಾಫಿಲೀಸ್ ಸೊಳ್ಳೆಯಿಂದ ಮಲೇರಿಯಾ ಬರುತ್ತದೆ. ಚಳಿಜ್ವರ, ರಕ್ತಹೀನತೆ, ಸುಸ್ತು, ತಲೆನೋವು, ವಾಂತಿ ಮಲೇರಿಯಾದ ಲಕ್ಷಣಗಳು. ಡೆಂಗೆ ಈಡೀಸ್ ಸೊಳ್ಳೆಯಿಂದ ಬರುತ್ತದೆ. ಮೈಕೈ ನೋವು, ಕೀಲು ನೋವು, ವಾಂತಿ, ತೀವ್ರ ಜ್ವರ ಇತ್ಯಾದಿ ಲಕ್ಷಣಗಳು ಚಿಕೂನ್‌ಗುನ್ಯದಲ್ಲಿ ಕಂಡು ಬರುತ್ತದೆ. ವೈರಸ್ ಹಾಗೂ ಬ್ಯಾಕ್ಟೀರಿಯಾದಿಂದ ಬರುವ ನೆಗಡಿ ಹಾಗೂ ಜ್ವರ ಗಂಟಲು ಕೆರೆತ, ತಲೆನೋವು, ಪದೇಪದೆ ಸೀನು,ಆಯಾಸ, ಕೆಮ್ಮು ಕಾಣಿಸುತ್ತದೆ.

ಮಳೆಗಾಲ ಮುಗಿಯುವ ವೆರೆಗೆ ಈ ಸಲಹೆಗಳನ್ನು ಪಾಲಿಸಿ :

# ನೆಗಡಿ, ಶೀತ, ಜ್ವರಕ್ಕೆ ಬೇಕಾಗುವ ಔಷಧಗಳನ್ನು ತಂದಿಟ್ಟುಕೊಳ್ಳಿ
ಮಳೆಗಾಲ ಆರಂಭವಾದಾಗ ಮೊದಲು ಎಲ್ಲರನ್ನೂ ಕಾಡೋದು ನೆಗಡಿ ಮತ್ತು ಜ್ವರ. ದೊಡ್ಡವರಾದರೆ ಒಂದಷ್ಟು ದಿನಗಳವರಗೆ ಇದನ್ನು ಸಹಿಸಿಕೊಂಡು ಬೇಗನೇ ಆರಾಮಾಗ್ತಾರೆ. ಆದ್ರೆ ಪುಟ್ಟ ಮಕ್ಕಳು ಅಥವಾ ವಯಸ್ಸಾದವರು ಇದ್ದರೆ ಅವರಿಗೆ ನೆಗಡಿ ಕೂಡಾ ತ್ರಾಸದಾಯಕವೇ. ಹಾಗಾಗಿ ಅಗತ್ಯ ಔಷಧಗಳು ಮನೆಯಲ್ಲೇ ಇದ್ದರೆ ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಔಷಧೋಪಚಾರ ಶುರುಮಾಡಬಹುದು. ಆಗ ಹೆಚ್ಚು ನರಳಾಟ ಇರುವುದಿಲ್ಲ

# ಛತ್ರಿ, ರೇನ್ ಕೋಟ್ ಗಳನ್ನು ತೆಗೆದಿಟ್ಟುಕೊಳ್ಳಿ
ಮನೆಯಿಂದ ಬೆಳಗ್ಗೆ ಹೊರಡುವಾಗ ಆಕಾಶ ತಿಳಿಯಾಗಿರಬಹುದು. ಆದರೆ ಸಂಜೆ ಮರಳುವಾಗ ಆಕಾಶವೇ ಕಳಚಿ ಬೀಳುವಂಥಾ ಮಳೆ ಬರಬಹುದು. ಹಾಗಾಗಿ ಛತ್ರಿ, ರೇನ್ ಕೋಟುಗಳನ್ನು ಮರೆಯದೇ ತೆಗೆದಿಟ್ಟುಕೊಳ್ಳಿ. ಅವುಗಳು ಹಾಳಾಗಿದ್ದರೆ ರಿಪೇರಿ ಮಾಡಿಸುವುದೋ ಅಥವಾ ಹೊಸತನ್ನು ಕೊಳ್ಳುವುದೋ ಮಾಡಿ. ಮಳೆಗಾಲದಲ್ಲಿ ಇವುಗಳು ದುಬಾರಿ ಕೂಡಾ ಆಗುತ್ತವೆ.

# ಸ್ವಟರ್, ಶಾಲ್ ಥರದ ಬೆಚ್ಚನೆಯ ಉಡುಪು ಮೇಲಿರಲಿ
ಮಳೆ ಬಂದಾಗ ವಾತಾವರಣ ಸಹಜವಾಗಿಯೇ ತಣ್ಣಗಿರುತ್ತದೆ. ಚಳಿ ಕೂಡಾ ಹೆಚ್ಚಾಗಬಹುದು. ಆದ್ದರಿಂದ ಮಳೆಗಾಲ ಶುರುವಾಗುವ ಮುನ್ನ ಸ್ವೆಟರ್, ಶಾಲುಗಳನ್ನು ತೆಗೆದಿಟ್ಟುಕೊಳ್ಳೋದು ಉತ್ತಮ. ಬೆಚ್ಚಗಿದ್ದಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ಹೊರಗೆ ಹೋಗುವಾಗಲೂ ಒಂದು ಶಾಲ್ ಬ್ಯಾಗಿನಲ್ಲಿದ್ದರೆ ಮಳೆ ಜೊತೆ ಬರುವ ಗಾಳಿಗೂ ನೀವು ಹೆದರಬೇಕಾಗಿರೋದಿಲ್ಲ.

# ಅತ್ಯಗತ್ಯ ದಿನಸಿ ಸಾಮಗ್ರಿಗಳನ್ನು ತಂದಿಟ್ಟುಕೊಳ್ಳಿ
ಮಳೆಗಾಲದಲ್ಲಿ ಹೊರಗೆ ಓಡಾಡೋದು ನಿಜಕ್ಕೂ ಹಿಂಸೆ. ಅದರಲ್ಲೂ ಶಾಪಿಂಗ್ ಮಾಡೋದು ಅನೇಕರಿಗೆ ರಗಳೆಯ ವಿಚಾರ. ರಸ್ತೆ ಬದಿಯ ವ್ಯಾಪಾರಿಗಳಂತೂ ಮಳೆಗಾಲದಲ್ಲಿ ನಾಪತ್ತೆಯೇ ಆಗಿರುತ್ತಾರೆ. ಹಾಗಾಗಿ ಅಗತ್ಯ ವಸ್ತುಗಳ ಸಣ್ಣ ದಾಸ್ತಾನು ಮನೆಯಲ್ಲಿರುವುದು ಬಹಳ ಅವಶ್ಯಕ. ಒಂದೊಂದು ಸಣ್ಣ ವಸ್ತುವಿಗೂ ಪದೇ ಪದೇ ಅಂಗಡಿಗೆ ಹೋಗುವ ರಗಳೆ ತಪ್ಪುತ್ತದೆ.

# ಮಳೆಗಾಲದ ಮನಮದ್ದುಗಳ ಸಾಮಗ್ರಿ ಅಡುಗೆ ಮನೆಯಲ್ಲಿರಲಿ
ಶುಂಠಿ, ಬೆಳ್ಳುಳ್ಳಿ, ಅರಿಶಿನ ಮುಂತಾದ ಅನೇಕ ವಸ್ತುಗಳು ಮಳೆಗಾಲದಲ್ಲಿ ಮನೆಮದ್ದಿಗೆ ಬಳಕೆಯಾಗ್ತವೆ. ಮನೆಯಲ್ಲಿ ಯಾರಾದ್ರೂ ಅಕ್ಷೀ… ಎನ್ನೋಕೆ ಶುರುಮಾಡಿದ್ರೆ ಮಾತ್ರೆ ಕೊಡುವ ಬದಲು ಒಂದು ಲೋಟ ಹಾಲಿಗೆ ಅರಿಶಿನ ಹಾಕಿ ಕೊಡ್ತಾರೆ. ಸಾಧಾರಣವಾಗಿ ಎಲ್ಲರ ಮನೆಗಳಲ್ಲೂ ಸಣ್ಣ ಪುಟ್ಟ ಅಡುಗೆಮನೆ ವೈದ್ಯರು ಇದ್ದೇ ಇರ್ತಾರೆ. ಮಳೆಗಾಲದಲ್ಲಿ ಇದರ ಅವಶ್ಯಕತೆ ಹೆಚ್ಚಿರೋದ್ರಿಂದ ಮಳೆ ಆರಂಭವಾಗುವ ಮುನ್ನವೇ ಇವುಗಳ ಸ್ಟಾಕ್ ಮನೆಯಲ್ಲಿರುವಂತೆ ನೋಡಿಕೊಳ್ಳೋದು ಉತ್ತಮ. ಇದೆಲ್ಲಾ ಯಾರಿಗೂ ತಿಳಿಯದ ವಿಚಾರಗಳೇನಲ್ಲ. ಆದರೆ ಮಳೆ ಶುರುವಾದ ಮೇಲಷ್ಟೇ ನೆನಪಾಗುತ್ತದೆ. ಆಮೇಲೆ ಪರದಾಡುವುದಕ್ಕಿಂತ ಮೊದಲೇ ತಯಾರಿ ಮಾಡಿಕೊಂಡ್ರೆ ಮಳೆಗಾಲವನ್ನು ಕೂಡಾ ನೆಮ್ಮದಿಯಾಗಿ ಕಳೆಯಲು ಸಾಧ್ಯವಾಗುತ್ತದೆ.

ಜೊತೆಗೆ ಈ ಮುನ್ನೆಚ್ಚರಿಕೆ ವಹಿಸಿ :
ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ. ಸೋಂಕು ಇರುವ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ನೀವು ಬಳಸಬೇಡಿ. ತಣ್ಣನೆಯ ನೀರಿನ ಸೇವನೆ ಬೇಡ. ಮಲಗುವಾಗ ಸೊಳ್ಳೆ ಪರದೆ ಅಥವಾ ಬತ್ತಿ ಬಳಸಿ. ದ್ರವರೂಪದ ಆಹಾರ ಹೆಚ್ಚು ಸೇವಿಸಿ. ಟೈಫಾಯಿಡ್, ಕಾಲಾರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸಿ.ಮಳೆ, ಗಾಳಿಗೆ ಮೈಯೊಡ್ಡದಿರಿ. ದೇಹವನ್ನು ಬೆಚ್ಚನೆಯ ಉಡುಪಿನಿಂದ ರಕ್ಷಿಸಿಕೊಳ್ಳಿ. ಬೇಕರಿ, ಎಣ್ಣೆ ಪದಾರ್ಥ, ಜಂಕ್‌ಫೂಡ್‌ನಿಂದ ದೂರವಿರಿ. ಆಹಾರ ಸೇವಿಸುವ ಮೊದಲು ಕೈಯನ್ನು ನೀಟಾಗಿ ತೊಳೆದುಕೊಳ್ಳಿ. ಬೇಯಿಸದ ತಿನಿಸುಗಳ ಸೇವನೆ ಬೇಡ. ಮಾರುಕಟ್ಟೆಯಲ್ಲಿ ತೆರೆದ ಸ್ಥಿತಿಯಲ್ಲಿರುವ ಹಣ್ಣು, ತಿನಿಸು ತಿನ್ನಬೇಡಿ. ರೋಗ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಸಮತೋಲಿತ ಆಹಾರ ಸೇವಿಸಿ. ವ್ಯಾಯಾಮ ಹಾಗೂ ವಿಶ್ರಾಂತಿ ಪಡೆಯಿರಿ. ಮನೆಯ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ

Facebook Comments

Sri Raghav

Admin