Good News : ಇನ್ಮುಂದೆ ಇಂದಿರಾ ಕ್ಯಾಂಟಿನ್‍ನಲ್ಲಿ ಸಿಗುತ್ತೆ ಕಾಫಿ, ಟೀ, ಮುದ್ದೆ..!

ಈ ಸುದ್ದಿಯನ್ನು ಶೇರ್ ಮಾಡಿ

indira-canteen-1
ಬೆಂಗಳೂರು, ಜು.11- ಬಡವರ ಹಸಿವು ನೀಗಿಸಲು ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಸ್ಥಾಪಿಸಲಾದ ಇಂದಿರಾ ಕ್ಯಾಂಟೀನ್‍ನಲ್ಲಿ ಇನ್ನು ಮುಂದೆ ಕಾಫಿ-ಟೀ ಕೂಡ ಸಿಗಲಿದೆ. ಇದುವರೆಗೆ ಸುಮಾರು 6 ಕೋಟಿ ಜನ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ-ಉಪಹಾರ ಮಾಡಿದ್ದಾರೆ. 198 ವಾರ್ಡ್‍ಗಳಲ್ಲಿ ಸ್ಥಳಾವಕಾಶ ದೊರೆಯದ 22 ವಾರ್ಡ್‍ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಒಂದೆರಡು ಕಡೆ ಮೊಬೈಲ್ ಕ್ಯಾಂಟೀನ್ ಕೂಡ ಪ್ರಾರಂಭಿಸಲಾಗಿದೆ.

5 ರೂ.ಗೆ ಬೆಳಗಿನ ಉಪಾಹಾರ, 10 ರೂ.ಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ಕೊಡಲಾಗುತ್ತಿದ್ದು , ಇಂದಿರಾ ಕ್ಯಾಂಟೀನ್‍ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಹಾಗಾಗಿ ಊಟ-ಉಪಾಹಾರಕ್ಕಾಗಿ 6 ಕೋಟಿ ಮಂದಿ ಕ್ಯಾಂಟೀನ್‍ಗೆ ಬಂದಿದ್ದಾರೆ. ಇವರೆಗೆ ಪಲಾವು, ಪೊಂಗಲ್ , ಇಡ್ಲಿ ಮತ್ತಿತರ ತಿಂಡಿ ಸಿಗುತ್ತಿತ್ತು. ಕಾಫಿ-ಟೀಗಾರಿ ಗ್ರಾಹಕರು ಬೇರೆಕಡೆಗೆ ಹೋಗಬೇಕಿತ್ತು. ಹಾಗಾಗಿ ಇನ್ನು ಮುಂದೆ ಇಂದಿರಾ ಕ್ಯಾಂಟೀನ್‍ನಲ್ಲೇ ಕಾಫಿ-ಟೀ ಕೊಡುವ ವ್ಯವಸ್ಥೆ ಮಾಡಲು ಬಿಬಿಎಂಪಿ ಚಿಂತನೆ ಮಾಡಿದೆ.

ಕೆಲವು ಗ್ರಾಹಕರು ಮುದ್ದೆಯನ್ನು ನೀಡಬೇಕೆಂದು ಬೇಡಿಕೆ ಇಟ್ಟಿರುವುದರಿಂದ ಅದನ್ನು ನೀಡಲು ಚಿಂತನೆ ನಡೆಸಲಾಗಿದೆ. ಇಂದಿರಾ ಕ್ಯಾಂಟೀನ್‍ಗಳ ಗುತ್ತಿಗೆ ಅವಧಿ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಮತ್ತೆ ನವೀಕರಿಸುವ ಸಂದರ್ಭದಲ್ಲಿ ಕಾಫಿ-ಟೀ ನೀಡುವುದು ಮತ್ತು ಊಟದಲ್ಲಿ ಮುದ್ದೆಯನ್ನು ಕೊಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಪಾಲಿಕೆ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ. ಈವರೆಗೆ ವಾರ್ಡ್‍ಗೆ ಒಂದೇ ಇಂದಿರಾ ಕ್ಯಾಂಟೀನ್ ಎಂಬ ನಿಯಮ ಇತ್ತು. ಆಗಸ್ಟ್ ತಿಂಗಳಿನಿಂದ ಬೇಡಿಕೆಗೆಗನುಣವಾಗಿ ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳ ಸಂಖ್ಯೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ.

Facebook Comments

Sri Raghav

Admin