ಬಿಜೆಪಿಯತ್ತ ಮುಖ ಮಾಡಿದ ಕಾಂಗ್ರೆಸ್‍ನ ಇಬ್ಬರು ಪ್ರಭಾವಿ ಮುಖಂಡರು…!

ಈ ಸುದ್ದಿಯನ್ನು ಶೇರ್ ಮಾಡಿ

Congress-To-BJP--01

ಬೆಂಗಳೂರು,ಜು.11- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನುವ ಬೆಳವಣಿಗೆಗಳ ನಡುವೆ ಕಾಂಗ್ರೆಸ್‍ನ ಇಬ್ಬರು ಪ್ರಭಾವಿ ಮುಖಂಡರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಹಾಗೂ ಮೈಸೂರು ಭಾಗದ ಪ್ರಭಾವಿ ದಲಿತ ಮುಖಂಡರೊಬ್ಬರು ಹಾಗೂ ಬೆಂಗಳೂರಿನ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ಮತ್ತು ಹಾಲಿ ಶಾಸಕರೊಬ್ಬರು ಕಾಂಗ್ರೆಸ್‍ಗೆ ಕೈ ಕೊಟ್ಟ ಬಿಜೆಪಿ ಸೇರುವ ಬಗ್ಗೆ ಆಲೋಚಿಸಿದ್ದಾರೆ.

ಈಗಾಗಲೇ ಒಂದು ಸುತ್ತು ಸ್ಥಳೀಯ ನಾಯಕರ ಜೊತೆ ಮಾತುಕತೆ ನಡೆಸಿದ್ದು, ಪಕ್ಷದಲ್ಲಿ ಸಿಗಬಹುದಾದ ಸ್ಥಾನಮಾನ ಹಾಗೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತಂತೆ ಚೌಕಾಸಿ ನಡೆದಿದೆ. ಒಂದು ವೇಳೆ 2019ರ ಲೋಕಸಭೆ ಚುನಾವಣೆಯಲ್ಲಿ ತಾವು ಬಯಸಿದ ಕ್ಷೇತ್ರದಿಂದ ಟಿಕೆಟ್ ನೀಡುವುದಾದರೆ ಪಕ್ಷ ಬಿಡಲು ಸಿದ್ಧ ಎಂಬ ಸಂದೇಶವನ್ನು ಬಿಜೆಪಿ ನಾಯಕರಿಗೆ ನೀಡಿದ್ದಾರೆ.  ಆದರೆ ರಾಜ್ಯ ಘಟಕದ ಬಿಜೆಪಿ ನಾಯಕರು ಟಿಕೆಟ್ ನೀಡುವ ಸಂಬಂಧ ಯಾವುದೇ ರೀತಿಯ ಖಚಿತ ಭರವಸೆಯನ್ನು ನೀಡುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರವು ಪ್ರಮುಖವಾಗಿರುವುದರಿಂದ ಪ್ರತಿ ಕ್ಷೇತ್ರಕ್ಕೂ ಟಿಕೆಟ್ ಹಂಚಿಕೆಯನ್ನು ವರಿಷ್ಠರೇ ತೀರ್ಮಾನಿಸುತ್ತಾರೆ. ಟಿಕೆಟ್ ಹಂಚಿಕೆಯಲ್ಲಿ ನಮ್ಮ ಪಾತ್ರ ಇರುವುದಿಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ.

# ಕಾಂಗ್ರೆಸ್ ಬಿಡಲು ಸಿದ್ಧ:
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಬಲ ಖಾತೆಯನ್ನು ಹೊಂದಿ ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಪ್ರಭಾವಿ ದಲಿತ ನಾಯಕರೊಬ್ಬರು ಬಿಜೆಪಿ ಸೇರಲು ಮುಂದಾಗಿರುವುದು ಕಾಂಗ್ರೆಸ್ ನಾಯಕರನ್ನು ನಿದ್ದೆಗೆಡುವಂತೆ ಮಾಡಿದೆ. ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವಾಗ ಸಿದ್ದರಾಮಯ್ಯನವರ ಜೊತೆಗಿನ ಸಂಬಂಧದಲ್ಲಿ ಬಿರುಕುಬಿಟ್ಟಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕವೂ ಉಭಯ ನಾಯಕರ ನಡುವಿನ ಸ್ನೇಹ ಎಣ್ಣೆ-ಸೀಗೆಕಾಯಿಯಂತಾಗಿದೆ.

ತಾವು ಬಯಸಿದ ಕ್ಷೇತ್ರಕ್ಕೆ ಟಿಕೆಟ್ ನೀಡಲಿಲ್ಲ ಎಂಬುದು ಒಂದು ಕಾರಣವಾದರೆ, ತಮ್ಮ ಮಗನಿಗೂ ಟಿಕೆಟ್ ಕೊಡಲಿಲ್ಲ ಎಂಬುದು ಮುನಿಸಿಗೆ ಮತ್ತೊಂದು ಕಾರಣ. ಅಲ್ಲದೆ ಚುನಾವಣಾ ಸಂದರ್ಭದಲ್ಲಿ ತಾವು ನಂಬಿದವರೇ ತಮ್ಮ ಪರ ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸದೆ ಪರೋಕ್ಷವಾಗಿ ಸೋಲಿಗೆ ಕಾರಣರಾದರೆಂಬುದು ಇವರ ಮುನಿಸು. ಹೀಗಾಗಿಯೇ ಕಾಂಗ್ರೆಸ್ ಬಿಡಲು ಚಿಂತನೆ ನಡೆಸಿದ್ದು, ಈಗಾಗಲೇ ಬಿಜೆಪಿ ನಾಯಕರ ಜೊತೆ ಪಕ್ಷ ಸೇರಲು ವೇದಿಕೆಯನ್ನು ಸಿದ್ದಪಡಿಸಿಕೊಳ್ಳುತ್ತಿದ್ದಾರೆ.  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಇನ್ನು ಮೈಸೂರು ಭಾಗದಲ್ಲಿ ಸಿದ್ದರಾಮಯ್ಯನವರ ಪ್ರಭಾವನ್ನು ತಗ್ಗಿಸಲು ಮುಂದಾಗಿರುವ ಮತ್ತೊಬ್ಬ ದಲಿತ ನಾಯಕ ಇವರನ್ನು ಬಿಜೆಪಿಗೆ ಕರೆತರಲು ವಿಶೇಷ ಆಸಕ್ತಿ ವಹಿಸಿದ್ದಾರೆ. ತಮ್ಮನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಸಿಡಿದೆದ್ದು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸೋತು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಅಳಿಯನನ್ನು ಗೆಲ್ಲಿಸಿಕೊಟ್ಟಿದ್ದಲ್ಲದೆ ಜಿಲ್ಲೆಯಲ್ಲಿ ಮೂರು ಸ್ಥಾನ ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.

# ಪ್ರಭಾವಿ ಶಾಸಕ ಬಿಜೆಪಿಗೆ:
ಇನ್ನು ಬೆಂಗಳೂರು ಭಾಗದ ಪ್ರಭಾವಿ ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಶಾಸಕರೊಬ್ಬರು ಬಿಜೆಪಿ ಸೇರುವ ಬಗ್ಗೆ ತಮ್ಮ ಆಪ್ತರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೂಲತಃ ಜನತಾ ಪರಿವಾರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಇವರು ತದನಂತರ ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದರು. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಬಲ ಖಾತೆಯನ್ನು ಹೊಂದಿದ್ದ ಇವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ತಮ್ಮನ್ನು ಕಡೆಗಣಿಸಿ ತಮ್ಮ ಸಮುದಾಯದಿಂದ ತಮಗಿಂತಲೂ ಕಿರಿಯರಾದವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದರಿಂದ ಬೇಸರಗೊಂಡು ಕಾಂಗ್ರೆಸ್‍ಗೆ ಟಾಟಾ ಹೇಳಿ ಕಮಲವನ್ನು ಮುಡಿಗೇರಿಸಿಕೊಳ್ಳಲು ಸಜ್ಜಾಗಿದ್ದಾರೆ.

ಈಗಾಗಲೇ ಪಕ್ಷ ಸೇರ್ಪಡೆ ಕುರಿತಂತೆ ರಹಸ್ಯ ಮಾತುಕತೆ ನಡೆದಿದ್ದು, ಬಿಜೆಪಿ ಸೇರ್ಪಡೆಯಾದರೆ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆ ತಮ್ಮ ಆಪ್ತರ ಜೊತೆಯೂ ಮಾತುಕತೆ ನಡೆಸಿದ್ದಾರೆ. ಬಿಜೆಪಿಯಲ್ಲಿರುವ ಹಾಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರೊಬ್ಬರು ಇವರನ್ನು ಪಕ್ಷಕ್ಕೆ ಕರೆತರಲು ವಿಶೇಷ ಕಾಳಜಿ ವಹಿಸಿದ್ದಾರೆ.

Facebook Comments

Sri Raghav

Admin