ರಾಜ್ಯದಾದ್ಯಂತ ಇನ್ನೂ 2 ದಿನ ಸುರಿಯಲಿದೆ ಭಾರಿ ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಬೆಂಗಳೂರು, ಜು.11- ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೀಳುತ್ತಿರುವ ಧಾರಾಕಾರ ಮಳೆ ಮುಂದುವರೆಯಲಿದ್ದು, ಒಳನಾಡಿನಲ್ಲೂ ಇನ್ನೆರಡು ದಿನಗಳ ಕಾಲ ಒಳ್ಳೆಯ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ ಉಂಟಾಗಿದೆ. ಮೇಲ್ಮೈ ಸುಳಿಗಾಳಿಯೂ ಕಂಡುಬಂದಿದ್ದು, ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತವಾದಂತಾಗಿದೆ. ಇದರಿಂದ ಹೆಚ್ಚಿನ ಮಳೆ ಸುರಿಯುತ್ತಿದ್ದು, ಇನ್ನು ನಾಲ್ಕೈದು ದಿನಗಳ ಕಾಲ ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯಾಗಲಿದೆ.  ರಾಜ್ಯದ ಒಳನಾಡಿನಲ್ಲೂ ನಿನ್ನೆ ಚದುರಿದಂತೆ ಕೆಲವೆಡೆ ಉತ್ತಮ ಮಳೆಯಾಗಿದೆ. ಇಂದು ಮತ್ತು ನಾಳೆ ಇದೇ ರೀತಿ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಯುವ ಮುನ್ಸೂಚನೆ ಇದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಾಲ್ಕೈದು ದಿನಗಳಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

ನಿನ್ನೆ ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮುಂಗಾರು ಚುರುಕಾಗಿರುವುದರಿಂದ ಜಲಾಶಯಗಳ ಒಳಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ. ಆಲಮಟ್ಟಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ರಾಜ್ಯದ ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದ್ದರಿಂದ ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಿತ್ತು. ಬಿತ್ತಿದ ಬೆಳೆಗಳು ಕೆಲವೆಡೆ ಒಣಗುತ್ತಿದ್ದವು. ಮತ್ತೆ ಮಳೆ ಶುರುವಾಗಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin