ಕಾಂಗ್ರೆಸ್ ನಾಯಕರಿಂದ ಒಗ್ಗಟ್ಟು ಪ್ರದರ್ಶನ, ಕಾರ್ಯಕರ್ತರಲ್ಲಿ ಹೆಚ್ಚಿದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

KPCC-7

ಬೆಂಗಳೂರು, ಜು.11-ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ಹಿಂದೆಂದೂ ಕಾಣದ ಒಗ್ಗಟ್ಟು ಪ್ರದರ್ಶಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.  ಇದುವರೆಗೂ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಯು.ಟಿ.ಖಾದರ್, ಪ್ರಿಯಾಂಕ್‍ಖರ್ಗೆ, ಜಮೀರ್ ಅಹಮ್ಮದ್‍ಖಾನ್, ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಕೆ.ಎಚ್.ಮುನಿಯಪ್ಪ, ಕೆ.ಸಿ.ಚಂದ್ರಶೇಖರ್, ರಾಮಮೂರ್ತಿ, ಚಂದ್ರಪ್ಪ, ರಾಜೀವ್‍ಗೌಡ, ನಾಸೀರ್ ಅಹಮ್ಮದ್, ಶಾಸಕರಾದ ಭೈರತಿ ಸುರೇಶ್, ರಿಜ್ವಾನ್ ಅರ್ಷದ್, ಹ್ಯಾರೀಸ್, ಆನಂದ್‍ಸಿಂಗ್, ಡಾ.ಯತೀಂದ್ರ, ಬಿ.ಸಿ.ಪಾಟೀಲ್, ಸೌಮ್ಯರೆಡ್ಡಿ ಭಾಗವಹಿಸಿದ್ದರು.

KPCC-6

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಎಚ್.ಕೆ.ಪಾಟೀಲ್, ರೋಷನ್‍ಬೇಗ್, ಎಂ.ಬಿ.ಪಾಟೀಲ್ ಮತ್ತು ಹಿರಿಯ ನಾಯಕರಾದ ಸಿ.ಕೆ.ಜಾಫರ್ ಶರೀಫ್, ರೆಹಮಾನ್‍ಖಾನ್ ಸೇರಿದಂತೆ ಅನೇಕ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಭರ್ತಿಯಾದ ವೇದಿಕೆ:ಸುಮಾರು 200 ಜನ ನಾಯಕರು ಕೂರಲು ಸಾಧ್ಯವಾಗುವಂತೆ ವೇದಿಕೆ ನಿರ್ಮಿಸಲಾಗಿತ್ತು. ಆದರೆ ಪ್ರಮುಖ ಮುಖಂಡರು, ಕಾರ್ಯಕರ್ತರು ಸೇರಿ ಸುಮಾರು 300 ಜನಕ್ಕೂ ಹೆಚ್ಚು ಮಂದಿ ವೇದಿಕೆಯಲ್ಲಿ ತುಂಬಿ ತುಳುಕುತ್ತಿದ್ದರು.

KPCC-4

ಕಾರ್ಯಕ್ರಮ ನಿರೂಪಕರು ವೇದಿಕೆಯಿಂದ ಕೆಳಗಿಳಿಯುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಯಾರೂ ಜಗ್ಗಲಿಲ್ಲ. ಅಧಿವೇಶನವನ್ನು ಬಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುತೇಕ ಶಾಸಕರಿಗೆ ಕುಳಿತುಕೊಳ್ಳಲು ಆಸನ ಸಿಗದೆ ವಾಪಸ್ ತೆರಳಿದರು. ಈ ನಡುವೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೂ ವೇದಿಕೆಯಲ್ಲಿ ಕುರ್ಚಿ ಸಿಗಲಿಲ್ಲ. ನೂತನ ಅಧ್ಯಕ್ಷ ಕಾರ್ಯಾಧ್ಯಕ್ಷರನ್ನು ಅಭಿನಂದಿಸಿ ವೇದಿಕೆಯಿಂದ ನಿರ್ಗಮಿಸಿದರು. ಶಾಸಕ ಬಿ.ಸಿ.ಪಾಟೀಲ್ ಕೂಡ ಕುರ್ಚಿ ಸಿಗದೆ ವಾಪಸ್ಸಾದರು. ಸಚಿವ ಯು.ಟಿ.ಖಾದರ್ ಆಗಮಿಸಿದಾಗ ಅವರಿಗೆ ಕುರ್ಚಿ ಸಿಗಲಿಲ್ಲ, ಕೊನೆಗೆ ಸಚಿವ ಪ್ರಿಯಾಂಕ್ ಖರ್ಗೆ ತಾವು ಎದ್ದು ನಿಂತು ಖಾದರ್ ಅವರಿಗೆ ಕುರ್ಚಿ ಬಿಟ್ಟುಕೊಟ್ಟರು.

KPCC-5

ಹಿರಿಯ ನಾಯಕರಾದ ಸಿ.ಕೆ.ಜಾಫರ್ ಶರೀಫ್ ಅವರು ಆಗಮಿಸಿದಾಗಲಂತೂ ಅವರಿಗೆ ಆಸನ ವ್ಯವಸ್ಥೆ ಮಾಡಿಕೊಡಲು ಪರದಾಡಬೇಕಾಯಿತು. ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಶಾಸಕ ರೋಷನ್‍ಬೇಗ್ ಅವರು ವಿಳಂಬವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು.  ಅವರಿಗೂ ಕುರ್ಚಿಸಿಗದೆ ವಾಪಸ್ಸಾಗುತ್ತಿದ್ದಾಗ ಯು.ಟಿ.ಖಾದರ್ ತಮ್ಮ ಕುರ್ಚಿಯಲ್ಲೇ ಅರ್ಧ ಬಿಟ್ಟುಕೊಟ್ಟು ಸ್ಥಳಾವಕಾಶ ಕಲ್ಪಿಸಿದರು. ಇಕ್ಕಟ್ಟಿನಲ್ಲಿ ಕುಳಿತಿದ್ದ ರೋಷನ್‍ಬೇಗ್ ಅವರನ್ನು ಸಚಿವ ಜಮೀರ್ ಅಹಮ್ಮದ್ ಖಾನ್ ಎರಡು ಮೂರು ಬಾರಿ ಕರೆದು ಗಮನ ಸೆಳೆಯುವ ಮೂಲಕ ಕೊನೆಗೂ ಮಾತನಾಡಿಸಿದರು. ನಂತರ ಜಮೀರ್ ಅಹಮ್ಮದ್ ಖಾನ್, ರೋಷನ್‍ಬೇಗ್ ಪರಸ್ಪರ ಕೈ ಕುಲುಕಿ ನಗುವಿನ ವಿನಿಮಯ ಮಾಡಿಕೊಂಡರು. ಜಮೀರ್ ಅಹಮ್ಮದ್ ಖಾನ್ ಬಳಿ ಇರುವ ಹಜ್ ಮತ್ತು ವಕ್ಫ್ ಖಾತೆಯನ್ನು ಬದಲಾವಣೆ ಮಾಡಬೇಕೆಂದು ರೋಷನ್‍ಬೇಗ್ ಪಟ್ಟು ಹಿಡಿದಿರುವುದರಿಂದ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

KPCC-3 KPCC-2 KPCC-1 KPCC

Facebook Comments

Sri Raghav

Admin