ಉಚಿತ ಬಸ್ ಪಾಸ್ ವಿಚಾರಕ್ಕೆ ಮೇಲ್ಮನೆಯಲ್ಲಿ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

Session-Parishat
ಬೆಂಗಳೂರು, ಜು.11- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುತ್ತಿರುವುದರಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಕ್ಷಭೇದ ಮರೆತು ಸಾರಿಗೆ ಸಚಿವರನ್ನು ಒತ್ತಾಯಿಸಿದ ಪ್ರಸಂಗ ಮೇಲ್ಮನೆಯ ಲ್ಲಿಂದು ಜರುಗಿತು. ಶೂನ್ಯವೇಳೆಯಲ್ಲಿ ಕಾಂಗ್ರೆಸ್‍ನ ಐವಾನ್ ಡಿಸೋಜಾ ವಿಷಯ ಪ್ರಸ್ತಾಪಿಸಿ, ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಸಿಗದ ಕಾರಣ ಅನೇಕ ಕಡೆ ತೊಂದರೆಯಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಹಣ ಕೊಟ್ಟು ಶಾಲಾ-ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಉಚಿತವಾಗಿ ಬಸ್‍ಪಾಸ್ ನೀಡಲು ಸರ್ಕಾರಕ್ಕಿರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.

ಸದಸ್ಯರ ಕಳಕಳಿಗೆ ಉತ್ತರಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಬೇಕೆಂಬುದು ಸರ್ಕಾರದ ಇಚ್ಛೆಯಾಗಿದೆ. ಆದರೆ, ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ ಎಂದರು. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಬೇಕೆಂದರೆ ಸರ್ಕಾರ ಶೇ.50ರಷ್ಟು, ಸಾರಿಗೆ ಸಂಸ್ಥೆ ಶೇ.25ರಷ್ಟು ಹಾಗೂ ವಿದ್ಯಾರ್ಥಿಗಳು ಶೇ.25ರಷ್ಟು ಹಣವನ್ನು ಭರಿಸಬೇಕು. ಈವರೆಗೂ ಶೇ.50ರಷ್ಟು ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಿದ್ದರಿಂದ ಸಂಸ್ಥೆಗೆ 500 ಕೋಟಿ ಬಾಕಿ ಹಣ ಬರಬೇಕಿದೆ. ಈ ಹಣ ಬಾರದ ಕಾರಣ ಸಂಸ್ಥೆ ನಷ್ಟಕ್ಕೆ ಸಿಲುಕಿದೆ ಎಂದರು.

ಐದು ವರ್ಷದಿಂದ ರಿಯಾಯಿತಿ ಬಸ್ ಪಾಸ್ ನೀಡಿದ್ದರಿಂದ 500 ಕೋಟಿ ಬಾಕಿ ಇದೆ. ಉಚಿತವಾಗಿ ಬಸ್ ಪಾಸ್ ನೀಡಬೇಕೆಂದರೆ ಎಲ್ಲ ಹಣವನ್ನೂ ಸಾರಿಗೆ ಸಂಸ್ಥೆಯೇ ಭರಿಸಬೇಕು. ಕಡೆ ಪಕ್ಷ ಸರ್ಕಾರ ಶೇ.75ರಷ್ಟು ಹಣವನ್ನು ಭರಿಸಿದರೆ ನಾವು ಶೇ.25ರಷ್ಟು ಹಣ ತುಂಬಿ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಸಿದ್ಧರಿದ್ದೇವೆ. ಇಲ್ಲದಿದ್ದಲ್ಲಿ ಕಷ್ಟಸಾಧ್ಯವಾದ ಕೆಲಸ ಎಂದು ಹೇಳಿದರು. ಹಿಂದಿನ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದಾಗಿ ಘೋಷಿಸಿತ್ತು. ಇದನ್ನು ಮುಂದುವರಿಸಿದರೆ ಸಂಸ್ಥೆಯು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.  ಆರ್ಥಿಕ ಇಲಾಖೆ ಈವರೆಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿಲ್ಲ. ಹಾಗಾಗಿ ಉಚಿತ ಬಸ್‍ಪಾಸ್ ನೀಡಲು ಸಾಧ್ಯವಾಗಿಲ್ಲ ಎಂದು ಸಚಿವರು ಸಮರ್ಥಿಸಿಕೊಂಡರು.

ಈ ಹಂತದಲ್ಲಿ ಆಡಳಿತ ಪಕ್ಷದ ಎಸ್.ಆರ್.ಪಾಟೀಲ್, ರವಿ ಸೇರಿದಂತೆ ಮತ್ತಿತರರು ನಿಮ್ಮ ಸಮಸ್ಯೆ ಏನೇ ಇರಲಿ, ಮೊದಲು ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ಪರ ಹೋರಾಟ ನಡೆಸುತ್ತಿರುವ ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು.

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದಾಗಿ ಹೇಳಿ ಈಗ ಮಾತಿಗೆ ತಪ್ಪಿದೆ ಎಂದು ದೂರಿದರು. ಸಂಸ್ಥೆಗೆ ಬಾಕಿ ಇರುವ ಹಣವನ್ನು ಎಬಿವಿಪಿಯವರು ಕೊಡುತ್ತಾರೆಯೇ ಎಂದು ತಮ್ಮಣ್ಣ ಅವರು ಹೇಳಿದಾಗ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಷಯದ ಬಗ್ಗೆ ಚರ್ಚಿಸಲು ಅರ್ಧ ಗಂಟೆ ಸಮಯ ನಿಗದಿಪಡಿಸುವುದಾಗಿ ಹೇಳಿದಾಗ, ಚರ್ಚೆಗೆ ತೆರೆ ಬಿದ್ದಿತು.

Facebook Comments

Sri Raghav

Admin