ಪತಿಯ ರಕ್ಷಣೆಗೆ ಅಂಗಲಾಚಿದ ಪತ್ನಿ, ನೆರವಿಗೆ ಬಾರದೇ ವಿಡಿಯೋ ಮಾಡುವಲ್ಲಿ ಬ್ಯುಸಿಯಾದ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

Women--01

ಗೌರಿಬಿದನೂರು, ಜು.11-ಆಟೋ ಮುಂದಿನ ಚಕ್ರ ಆಕಸ್ಮಿಕವಾಗಿ ಕಳಚಿದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದು, ಅದೇ ಆಟೋದಲ್ಲಿದ್ದ ಆತನ ಪತ್ನಿ, ಪತಿಯ ರಕ್ಷಣೆಗೆ ಪರಿ ಪರಿಯಾಗಿ ಬೇಡಿಕೊಂಡರೂ ಜನ ಸಹಾಯಕ್ಕೆ ಬರುವುದು ಬಿಟ್ಟು ಮೊಬೈಲ್‍ಗಳಲ್ಲಿ ವಿಡೀಯೋ ಚಿತ್ರೀಕರಣ ಮಾಡುತ್ತಾ ಮಾನವೀಯತೆಯನ್ನೇ ಮರೆತರು.

ಮಹಮದ್ ಖಾನ್ (51) ಎಂಬುವರು ಸ್ವಂತ ಆಟೋದಲ್ಲಿ ಪತ್ನಿಯೊಂದಿಗೆ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ತೂಮಕುಂಟೆ ಚೆಕ್‍ ಪೋಸ್ಟ್ ಬಳಿಯಿಂದ ಗೌರಿಬಿದನೂರು ಕಡೆಗೆ ಬರುತ್ತಿದ್ದಾಗ ಏಕಾಏಕಿ ಆಟೋ ಮುಂದಿನ ಚಕ್ರ ಕಳಚಿ ಮೂರು ಪಲ್ಟಿ ಹೊಡೆದಿದೆ. ಇದರಿಂದ ಮಹಮದ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದು, ಪತ್ನಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದೆ. ರಸ್ತೆಯ ಮಧ್ಯೆ ರಕ್ತದ ಮಡುವಿನಲ್ಲಿ ಸಾವು-ಬದುಕಿನ ನಡುವೆ ಬಿದ್ದಿದ್ದ ಪತಿಯನ್ನು ರಕ್ಷಿಸುವಂತೆ , ತಮ್ಮ ಸಂಬಂಧಿಕರಿಗೆ ಫೋನ್ ಮಾಡಿ ಎಂದು ಆತನ ಪತ್ನಿ ಅಲ್ಲಿ ನೆರೆದಿದ್ದವರಿಗೆ ಪರಿ ಪರಿಯಾಗಿ ಬೇಡಿಕೊಂಡು ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದರೆ ಅಲ್ಲಿ ನೆರೆದಿದ್ದ ಸಾರ್ವಜನಿಕರು ಕನಿಷ್ಟ ಆಟೋವೊಂದರಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸುವ ಔದಾರ್ಯವನ್ನೂ ತೋರದೆ ಮೊಬೈಲ್‍ಗಳಲ್ಲಿ ವಿಡಿಯೋ ತೆಗೆಯುವಲ್ಲಿ ನಿರತರಾಗಿದ್ದರು.  ಕೊನೆಗೂ ಪತಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್‍ನಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಮುಂದಾದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮಹಮದ್ ಖಾನ್ ಸಾವನ್ನಪ್ಪಿದ್ದಾರೆ.

ಕ್ಷಣಾರ್ಧದಲ್ಲಿ ಆಟೋ ಚಕ್ರ ಕಳಚಿ ಇಷ್ಟೆಲ್ಲಾ ಅವಘಡ ನಡೆದುಹೋಯ್ತು. ನನಗೆ ಇನ್ಯಾರು ದಿಕ್ಕು..ನಮ್ಮ ಸಂಸಾರಕ್ಕೆ ಯಾರು ದಿಕ್ಕು..ಓ ಅಲ್ಲಾ ಈ ಸಾವು ನ್ಯಾಯವೇ ಎಂದು ಮೃತನ ಪತ್ನಿ ರೋದಿಸುತ್ತಿದ್ದುದು ನೋಡುಗರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತ್ತು.

ಮಾನವೀಯತೆ ತೋರಿ:
ರಸ್ತೆಯಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ ಸಾರ್ವಜನಿಕರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿ, ಇಲ್ಲವೇ 108 ಆ್ಯಂಬುಲೆನ್ಸ್‍ಗೆ ಕರೆ ಮಾಡಿ, ಅಪಘಾತಗೊಳಗಾದ ಗಾಯಾಳುಗಳನ್ನು ನಿಮ್ಮದೇ ಆದ ವಾಹನಗಳಲ್ಲಿ ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ. ಸಾವು-ಬದುಕಿನ ಮಧ್ಯೆ ಹೋರಾಟ ಮಾಡುವವರನ್ನು ಪ್ರಾಣ ಉಳಿಸಲು ಸಹಕರಿಸಿ. ಅಕಸ್ಮಾತ್ ಆ ವ್ಯಕ್ತಿ ಮೃತಪಟ್ಟಲ್ಲಿ ನಿಮ್ಮ ಮೇಲೆ ಯಾವುದೇ ಪ್ರಕರಣವನ್ನು ಪೊಲೀಸರು ದಾಖಲಿಸುವುದಿಲ್ಲ, ಪ್ರಕರಣದ ಬಗ್ಗೆ ವಿವರವನ್ನು ಪಡೆದುಕೊಳ್ಳಲಾಗುತ್ತದೆ ಅಷ್ಟೇ. ನಿಮ್ಮನ್ನು ಯಾವುದೇ ಕೋರ್ಟ್ ಕೇಸು ಕರೆಯುವುದಿಲ್ಲ, ದಯವಿಟ್ಟು ಮಾನವೀಯತೆ ತೋರಿ ಜೀವ ಉಳಿಸುವ ಕಾಯಕಕ್ಕೆ ಮುಂದಾಗಿ,ಸಂಸಾರವನ್ನು ಉಳಿಸಿ ಎಂದು ಗೌರಿಬಿದನೂರು ವೃತ್ತ ನಿರೀಕ್ಷಕ ವೈ.ಅಮರನಾರಾಯಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin