ಪೌರ ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡದ ಆಯುಕ್ತರುಗಳಿಗೆ ಮೇಯರ್ ಕ್ಲಾಸ್

ಈ ಸುದ್ದಿಯನ್ನು ಶೇರ್ ಮಾಡಿ

Mayor-BBMP-sampat-raj
ಬೆಂಗಳೂರು, ಜು.12- ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ಮಾಡದ ಜಂಟಿ ಆಯುಕ್ತರುಗಳನ್ನು ಮೇಯರ್ ಸಂಪತ್‍ರಾಜ್ ತೀವ್ರ ತರಾಟೆಗೆ ತೆಗೆದುಕೊಂಡರು. ಇಂದು ಕರೆಯಲಾಗಿದ್ದ ಪಾಲಿಕೆ ವಿಶೇಷ ಸಭೆಯಲ್ಲಿ ಜಂಟಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಮೇಯರ್, ಮೊದಲು ನಿಮ್ಮ ಜವಾಬ್ದಾರಿ ಏನೆಂಬುದನ್ನು ಸರಿಯಾಗಿ ಅರಿತುಕೊಳ್ಳಿ. ಆರು ತಿಂಗಳಿಂದ ಎಷ್ಟು ಮಂದಿ ಹೆಚ್ಚುವರಿ ಪೌರ ಕಾರ್ಮಿಕರು ಇದ್ದಾರೆ. ಅವರುಗಳು ಹೆಚ್ಚುವರಿಯಾಗಿದ್ದಾರೆಂದು ಗೊತ್ತಿದ್ದರೂ ಏನೂ ಕ್ರಮ ತೆಗೆದುಕೊಳ್ಳದೆ ಏಕೆ ಸುಮ್ಮನಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ತಪ್ಪು ಮಾಡುವವರು ನೀವು, ಉತ್ತರ ನಾವು ಕೊಡಬೇಕಾ ಎಂದು ಪ್ರಶ್ನಿಸಿದ ಸಂಪತ್‍ರಾಜ್, ನಿಮ್ಮ ತಪ್ಪನ್ನು ಮುಚ್ಚೋದಕ್ಕೆಂದೇ 198 ಸದಸ್ಯರಿರೋದಾ ಎಂದು ಜಂಟಿ ಆಯುಕ್ತರುಗಳಿಗೆ ಛಳಿ ಬಿಡಿಸಿದರು.
ಎಂಟು ವಲಯಗಳಲ್ಲೂ ಹೆಚ್ಚುವರಿ ಪೌರ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದೀರಿ. ಆದರೆ, ವೇತನ ಬಿಡುಗಡೆ ಮಾಡುವಾಗ ಮಾತ್ರ ಹೆಚ್ಚುವರಿ ಅಂತ ಸಬೂಬು ಹೇಳ್ತೀರಾ, ಇದ್ಯಾವ ನ್ಯಾಯ ರೀ ಎಂದು ಹೇಳಿದರು.

ಬಯೋಮೆಟ್ರಿಕ್ ವ್ಯವಸ್ಥೆಗೆ ಪೌರ ಕಾರ್ಮಿಕರನ್ನು ಸೇರಿಸಲಾಗಿದೆ. ಪ್ರತಿದಿನ ಮೂರು ಬಾರಿ ಬಯೋ ಮೆಟ್ರಿಕ್‍ನಲ್ಲಿ ನಮೂದು ಮಾಡಿಸ್ತಿದ್ದೀರಾ, ಈ ವ್ಯವಸ್ಥೆಯಡಿಯಲ್ಲಿರೋ ಪೌರ ಕಾರ್ಮಿಕರಿಗೆ ಏಕೆ ವೇತನ ಕೊಡ್ತಿಲ್ಲ ಎಂದು ಮೇಯರ್ ಪ್ರಶ್ನೆಗಳ ಸುರಿಮಳೆಗೈದರು. ನಿಮ್ಮ ನಿಮ್ಮ ಝೋನ್‍ನಲ್ಲಿ ಎಷ್ಟು ಮಂದಿ ಹೆಚ್ಚುವರಿ ಪೌರ ಕಾರ್ಮಿಕರು ಬಂದಿದ್ದಾರೆ, ಹೆಚ್ಚುವರಿಯಾಗಿ ಹೇಗೆ ಅವರಿಗೆ ಕೆಲಸ ಕೊಟ್ರಿ, ಬಯೋಮೆಟ್ರಿಕ್‍ನಲ್ಲಿ ಪಂಚ್ ಮಾಡಲು ಏಕೆ ಬಿಟ್ರಿ, ಕೌನ್ಸಿಲ್ ಗಮನಕ್ಕೆ ತಾರದೆ ಅನಾವಶ್ಯಕ ಪೌರ ಕಾರ್ಮಿಕರನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡಿದ್ದಾದರೂ ಏಕೆ ಎಂದು ಒಂದೊಂದಾಗಿ ಮೇಯರ್ ಪ್ರಶ್ನೆ ಕೇಳುತ್ತಿದ್ದಂತೆ ಉತ್ತರ ಕೊಡಲು ಜಂಟಿ ಆಯುಕ್ತರುಗಳು ತಡಕಾಡಿ ತಬ್ಬಿಬ್ಬಾದರು.

ಯಾವುದೇ ವಿಷಯವನ್ನು ಡೈವರ್ಟ್ ಮಾಡಬೇಡಿ. ನೇರವಾಗಿ ಉತ್ತರ ಕೊಡ್ರಿ ಎಂದು ಮೇಯರ್ ಕೇಳಿದಾಗ, ಜಂಟಿ ಆಯುಕ್ತರುಗಳು ತಡಬಡಾಯಿಸಿದರು. ಎಂಟು ವಲಯಗಳ ಅಧಿಕಾರಿಗಳು ಇದಕ್ಕೆಲ್ಲ ಉತ್ತರ ಕೊಡಲೇಬೇಕೆಂದು ಮೇಯರ್ ಆದೇಶಿಸಿದರು. ಎಫ್‍ಐಆರ್ ದಾಖಲಿಸಿ: ಈ ವೇಳೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮಾತನಾಡಿ, ಪೌರ ಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮಾತನಾಡಿ, ಎಲ್ಲ ವಲಯಗಳ ಜಂಟಿ ಆಯುಕ್ತರಗಳನ್ನು ಕರೆಸಿ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಪೌರ ಕಾರ್ಮಿಕರ ವೇತನ ಬಾಕಿ ಉಳಿಯಲು ಈ ಜೆಸಿಗಳ ಬೇಜವಾಬ್ದಾರಿಯೇ ಮುಖ್ಯ ಕಾರಣ. ಇಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂದು ಹೇಳಿದರು. ಈ ವೇಳೆ ಸದಸ್ಯ ಉಮೇಶ್‍ಶೆಟ್ಟಿ ಮಾತನಾಡಿ, ಬಿಬಿಎಂಪಿಯಿಂದ 3330 ಜನರಿಗೆ ವೇತನ ಕೊಡಲು ಆಗಲಿಲ್ಲ. ಅದಕ್ಕೆ ಒಬ್ಬ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಇನ್ನೆಷ್ಟು ಜನ ಸುಬ್ರಹ್ಮಣ್ಯನಂತಹವರು ಬಲಿಯಾಗಬೇಕು ಎಂದು ಕಿಡಿಕಾರಿದರು.

Facebook Comments

Sri Raghav

Admin