ಸಹಕಾರಿ ಬ್ಯಾಂಕುಗಳಲ್ಲಿನ 1ಲಕ್ಷ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 2ಲಕ್ಷ ರೂ. ರೈತರ ಸಾಲ ಮನ್ನಾ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy

ಬೆಂಗಳೂರು, ಜು.12-ಸಹಕಾರ ಬ್ಯಾಂಕ್‍ಗಳ ಜೊತೆಗೆ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಪಡೆದ ಚಾಲ್ತಿ ಸಾಲದ ಮನ್ನಾ, ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್, ಅನ್ನಭಾಗ್ಯ ಅಕ್ಕಿ ಎರಡು ಕೆಜಿ ಹೆಚ್ಚಳ ಸೇರಿದಂತೆ ಹಲವಾರು ಮಹತ್ವದ ಘೋಷಣೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.  . ವಿಧಾನಸಭೆಯಲ್ಲಿ ತಾವು ಮಂಡಿಸಿದ್ದ ಬಜೆಟ್ ಮೇಲೆ ಕಳೆದ ಮೂರ್ನಾಲ್ಕು ದಿನಗಳಿಂದ ನಡೆದ ಚರ್ಚೆಗೆ ಇಂದು ಮಧ್ಯಾಹ್ನ ವಿಧಾನಸಭೆಯಲ್ಲಿ ಉತ್ತರ ನೀಡಿದ ಕುಮಾರಸ್ವಾಮಿ ಅವರು, ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದರು.

ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ಒಂದು ಲಕ್ಷ ರೂ.ವರೆಗಿನ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಎರಡು ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಲು ಸಮ್ಮಿಶ್ರ ಸರಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು. ಸಾಲ ಮನ್ನಾ ಮಾಡುವುದರ ಜೊತೆಗೆ ಒಂದು ತಿಂಗಳಲ್ಲಿ ರೈತರಿಗೆ ಋಣಮುಕ್ತ ಪತ್ರ ಹಾಗೂ ಹೊಸ ಸಾಲ ಪಡೆಯಲು ಅವಕಾಶ ಕಲ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಈ ಸಂಬಂಧ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಸಹಕಾರಿ ಸಂಘಗಳಲ್ಲಿನ ಚಾಲ್ತಿ ಸಾಲ ಒಂದು ಲಕ್ಷ ರೂ.ವರೆಗೂ ಮನ್ನಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇದಕ್ಕಾಗಿ 10,700 ಕೋಟಿ ರೂ.ಹೊರೆಯಲಾಗಲಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ನೀಡುವ 5 ಕೆ.ಜಿ.ಅಕ್ಕಿಯನ್ನು 7 ಕೆ.ಜಿ.ಗೆ ಹೆಚ್ಚಿಸಲು ಎರಡೂವರೆ ಸಾವಿರ ಕೋಟಿ ರೂ ಹೊರೆಯಾಗಲಿದೆ. ಈ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ನಮ್ಮ ಸಾಲ ಮನ್ನಾ ಯೋಜನೆಯಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 29,279 ಕೋಟಿ ರೂ.ಸಾಲ ಮನ್ನಾ ಆಗಲಿದೆ. ಪ್ರತಿ ವರ್ಷ ರಾಷ್ಟ್ರೀಕೃತ ಬ್ಯಾಂಕುಗಳಿಗೆ 6,500 ಕೋಟಿ ರೂ.ಪಾವತಿ ಮಾಡಲಾಗುತ್ತದೆ. ಈ ಕುರಿತಂತೆ ಸಮಗ್ರವಾಗಿ ಚರ್ಚೆ ಮಾಡಿದ್ದೇವೆ. ಈ ಸರಕಾರ ಐದು ವರ್ಷಗಳ ಕಾಲ ಮುಂದುವರೆಯಲಿದ್ದು, ಹಿಂದಿನ ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಅವರು ತಿಳಿಸಿದರು. ಈ ಬಜೆಟ್ ಕೇವಲ ಕೆಲವು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಅಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಆದ್ಯತೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರೈತರ ಸಾಲ ಮನ್ನಾ ಮಾಡುವ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಇದಕ್ಕಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸಾಲ ಮನ್ನಾ ಯೋಜನೆಯಿಂದಾಗಿ ಬೆಳಗಾವಿ ಜಿಲ್ಲೆಗೆ 2,670 ಕೋಟಿ ರೂ, ಬಾಗಲಕೋಟೆಗೆ 1,820 ಕೋಟಿ ರೂ, ವಿಜಯಪುರ 1,510 ಕೋಟಿ ರೂ, ಧಾರವಾಡಕ್ಕೆ 1,026 ಕೋಟಿ ರೂ, ಹಾವೇರಿಗೆ 1,036 ಕೋಟಿ ರೂ., ಗದಗ 722 ಕೋಟಿ ರೂ, ಉತ್ತರ ಕನ್ನಡ 407 ಕೋಟಿ ರೂ, ದಾವಣಗೆರೆ 1,212 ಕೋಟಿ ರೂ, ತುಮಕೂರು 1,185 ಕೋಟಿ ರೂ.ಗಳ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಶಿವಮೊಗ್ಗ 988 ಕೋಟಿ ರೂ, ಚಿತ್ರದುರ್ಗ 918 ಕೋಟಿ ರೂ, ಬೆಂಗಳೂರು ಗ್ರಾಮಾಂತರ 731 ಕೋಟಿ ರೂ, ರಾಮನಗರ 630 ಕೋಟಿ ರೂ.ಗಳ ಪ್ರಯೋಜನವಾಗಲಿದೆ. ಇದರಡಿಯಲ್ಲಿ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಲಾಭ ಆಗಲಿದೆ ಎಂದು ಅವರು ಅಂಕಿ ಅಂಶಗಳ ಸಮೇತ ಸಮರ್ಥಿಸಿಕೊಂಡರು.

ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ, ವಿದ್ಯುತ್ ಹಾಗೂ ಮದ್ಯದ ದರ ಹೆಚ್ಚಳವನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 83.12 ರೂ., ಮಧ್ಯಪ್ರದೇಶ 81.14, ಬಿಹಾರ 81.04, ಆಂಧ್ರಪ್ರದೇಶ 80 ರೂ., ಕೇರಳ 78 ರೂ., ತಮಿಳುನಾಡು 78.04 ರೂ, ರಾಜಸ್ಥಾನ 78.27 ರೂ.ಗಳಷ್ಟಿದೆ. ನಮ್ಮ ರಾಜ್ಯದಲ್ಲಿ ಈಗ ತೆರಿಗೆ ಹೆಚ್ಚಳ ನಂತರ 77.97 ಆಗಿರಲಿದೆ ಎಂದರು.

 

 

 

Facebook Comments

Sri Raghav

Admin