ರಾಜ್ಯದಾದ್ಯಂತ ಇಂದೂ ಕೂಡ ಭಾರಿ ಮಳೆ ಸಾಧ್ಯತೆ, ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಕೊಡಗು. ಜು. 3 : ಕೊಡಗು ಜಿಲ್ಲೆಯಾದ್ಯಂತ ಇಂದೂ ಕೂಡ ಭಾರಿ ಮಳೆ ಸುರಿಯುವ ನೀರಿಕ್ಷೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಕೂಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ ಐ ಶ್ರೀ ವಿದ್ಯಾ ಆದೇಶ ಹೊರಡಿಸಿದ್ದಾರೆ.  ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಎಡಬಿಡದೆ ಸರಿಯುತ್ತಿರುವ ಮಳೆಯಿಂದ ಸಾರ್ವಜನಿಕರು ನಿತ್ಯದ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರ ಹೋಗುವುದು ಕಷ್ಟವಾಗುತ್ತಿದೆ. ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ 24×7 ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 221077 ನ್ನು ಸಂಪರ್ಕಿಸಲು ಕೋರಿದ್ದಾರೆ.

ದೇಶಾದ್ಯಂತ ನೈಋತ್ಯ ಮುಂಗಾರು ಚುರುಕುಗೊಂಡಿರುವುದರಿಂದ ರಾಜ್ಯದಲ್ಲೂ ಅದರಲ್ಲೂ ಕರಾವಳಿ, ದಕ್ಷಿಣ ಕನ್ನಡ, ಕೊಡಗಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಮೊನ್ನೆ ಭಾನುವಾರದಿಂದ ನಿನ್ನೆ ಬೆಳಗ್ಗೆ 8.30ರ ಹೊತ್ತಿಗೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 104.56 ಮಿ.ಮೀ. ಕಳೆದ ವರ್ಷ ಇದೇ ದಿನ 22.60 ಮಿ.ಮೀ ದಾಖಲಾಗಿತ್ತು. ಹಾರಂಗಿ ಜಲಾಶಯದ ನೀರಿನ ಮಟ್ಟ 2,859 ಅಡಿಗಳಾಗಿದ್ದು ನಿನ್ನೆ ನೀರಿನ ಮಟ್ಟ 2806.80 ಅಡಿಗಳಾಗಿದ್ದವು. ಕಳೆದ ವರ್ಷ ಇದೇ ದಿನ 2808.07 ಅಡಿಗಳಷ್ಟು ನೀರು ತುಂಬಿತ್ತು.

ಕರ್ನಾಟಕ ಕರಾವಳಿಯಲ್ಲೂ ಇಂದು ಸಹ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು ಮತ್ತು ಹಾಸನಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಉಳಿದಂತೆ ಬೆಂಗಳೂರು, ಚಿತ್ರದುರ್ಗ, ಚಾಮಾರಾಜನಗರ, ಚಿಕ್ಕಮಂಗಳೂರು, ಹಾಸನ, ಕೋಲಾರ, ಮೈಸೂರು, ತುಮಕೂರುಗಳಲ್ಲೂ ಇಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮೋಡದ ಕವಿದ ವಾತಾವರಣ ಕಂಡುಬರಲಿದ್ದು, ಕೆಲವೆಡೆ ಮಳೆಯೂ ಕಾಣಸಿಕೊಳ್ಳಲಿದೆ. ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀದರ್, ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲೂ ಸ್ವಲ್ಪ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Facebook Comments

Sri Raghav

Admin