ಸರ್ಕಾರಿ ನೌಕರರ ಹಳೆ ಪಿಂಚಣಿ ವ್ಯವಸ್ಥೆಗೆ ಆಗ್ರಹಿಸಿ ಮೇಲ್ಮನೆಯಲ್ಲಿ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

VidhanaParishat
ಬೆಂಗಳೂರು, ಜು.12- ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಯನ್ನೇ (ಒಪಿಎಸ್) ಜಾರಿಗೊಳಿಸ ಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ವಿಧಾನಪರಿಷತ್‍ನಲ್ಲಿ ನಡೆಯಿತು. ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನೂತನ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ನಾವು ಕೇಳಿದ ಪ್ರಶ್ನೆಗೆ ಉತ್ತರ ನೀಡದಿರುವ ಬಗ್ಗೆ ಬಿಜೆಪಿ ಸದಸ್ಯರಾದ ಎಸ್.ವಿ.ಸಂಕನೂರು, ಅರುಣ್ ಶಹಾಪುರ್ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಶಿಕ್ಷಣ ಸಚಿವ ಮಹೇಶ್ ಅವರು, ಮುಂದಿನ 15 ದಿನದೊಳಗೆ ಈ ಬಗ್ಗೆ ಉತ್ತರ ಕೊಡುವುದಾಗಿ ಹೇಳಿದರು.

ಸುಮಾರು 20 ಸಾವಿರ ಪುಟಗಳ ಜೆರಾಕ್ಸ್ ಮಾಡಬೇಕಾಗಿದೆ ಎಂದು ಹೇಳಿದಾಗ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಉತ್ತರ ಬಂದಿದೆಯೋ, ಇಲ್ಲವೋ ಅಷ್ಟು ಹೇಳಿ. ಸರ್ಕಾರಿ ನೌಕರರಿಗೆ ಯೋಜನೆಯಿಂದ ತೊಂದರೆಯಾಗುತ್ತಿದೆ ಎಂದು ಆಕ್ಷೇಪವ್ಯಕ್ತಪಡಿಸಿ ಬಾವಿಯ ಬಳಿ ಧಾವಿಸಿದರು. ಸದನದ ಬಾವಿಯಲ್ಲಿ ನಿಂತು ಅರುಣ್ ಶಹಾಪುರ್ ಅವರು ಮಾತನಾಡಲು ಮುಂದಾದಾಗ, ಬಸವರಾಜ ಹೊರಟ್ಟಿ ಅವರು ಈ ರೀತಿ ಮಾತನಾಡಬಾರದೆಂದು ಅವರನ್ನು ತಡೆದರು.

ಸರ್ಕಾರದ ಧೋರಣೆಯನ್ನು ಪ್ರತಿಪಕ್ಷದ ಸದಸ್ಯರು ಖಂಡಿಸಿದರು. ಇದು ಸದನದ ನಡಾವಳಿಯಲ್ಲಿಲ್ಲ, ಸದನವನ್ನು ಕೆಲಕಾಲ ಮುಂದೂಡಿ ಎಂದು ಬಿಜೆಪಿ ಸದಸ್ಯ ಮಲ್ಕಾಪುರೆ ಸಲಹೆ ಮಾಡಿದರು. ಇದಕ್ಕೆ ಸಭಾಪತಿಗಳು ಒಪ್ಪಲಿಲ್ಲ. ಕಾಂಗ್ರೆಸ್-ಜೆಡಿಎಸ್‍ನ ಸದಸ್ಯರು ದನಿಗೂಡಿಸಿ, ಸದನವನ್ನು ಏಕೆ ಮುಂದೂಡಬೇಕು. ಸಚಿವರು ಹತ್ತು ದಿನದಲ್ಲಿ ಉತ್ತರಿಸುವುದಾಗಿ ತಿಳಿಸಿದ್ದಾರೆ. ಇಷ್ಟು ಕಾಲಾವಕಾಶ ನೀಡದಿದ್ದರೆ ಹೇಗೆ? ಎಂದು ಹೇಳಿದರು.  ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಚಿವರು ನಾಳೆಯೇ ಸದನದ ಸದಸ್ಯರ ಸಭೆ ಕರೆದು ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿದಾಗ, ಪ್ರತಿಪಕ್ಷದ ಸದಸ್ಯರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

Facebook Comments

Sri Raghav

Admin