ಫ್ಲೆಕ್ಸ್’ಗೆ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೀಡಿ ಕಾಳಜಿ ಮೆರೆದ ಕೆಪಿಸಿಸಿ ರೈತ ವಿಭಾಗ

ಈ ಸುದ್ದಿಯನ್ನು ಶೇರ್ ಮಾಡಿ

KPCC-Former

ಬೆಂಗಳೂರು, ಜು.13-ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸ್ವಾಗತಿಸಲು ಹಾಕುವ ಫ್ಲೆಕ್ಸ್ ಗಳಿಗಾಗಿ ವ್ಯಯಿಸುವ ಹಣವನ್ನು ಮೆಣಸಿನ ಬೆಳೆ ನಾಶವಾಗಿ ಸಂಕಷ್ಟಕ್ಕೊಳಗಾಗಿದ್ದ ರೈತರಿಗೆ ನೀಡುವ ಮೂಲಕ ಕೆಪಿಸಿಸಿ ರೈತ ವಿಭಾಗ ರೈತಪರ ಕಾಳಜಿ ಮೆರೆದಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ತುಂಬ್ರಗುದ್ದಿಯ ಮೆಣಸಿನ ಬೆಳೆಗಾರ ಸುಂಕಪ್ಪ ಅವರಿಗೆ ಕೆಪಿಸಿಸಿ ಕಿಸಾನ್ ವಿಭಾಗದಿಂದ 50 ಸಾವಿರ ರೂ. ಡಿಡಿಯನ್ನು ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ವೇಳೆ ವಿತರಿಸಲಾಯಿತು.

ಕಳೆದ ಏಪ್ರಿಲ್‍ನಲ್ಲಿ ಸುಂಕಪ್ಪ ಅವರು ಬೆಳೆದಿದ್ದ ಸುಮಾರು 28 ಕ್ವಿಂಟಾಲ್ ಮೆಣಸಿನಕಾಯಿಗೆ ಸಿಡಿಲು ಬಡಿದು ಸಂಪೂರ್ಣ ನಾಶವಾಗಿತ್ತು. ಇದರಿಂದ ಸಾಕಷ್ಟು ತೊಂದರೆಗೆ ಸಿಲುಕಿದ್ದ ಸುಂಕಪ್ಪ ಪರಿಹಾರಕ್ಕಾಗಿ ಸಂಡೂರು ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದ್ದರು. ಇದಲ್ಲದೆ ಸಂಬಂಧಿತ ಅಧಿಕಾರಿ ಗಳಿಗೂ ಮನವಿ ಸಲ್ಲಿಸಿದ್ದರೂ ಪರಿಹಾರ ದೊರೆತಿರಲಿಲ್ಲ. ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂತೋಷ್ ಲಾಡ್, ಜಗದೀಶ್ ಶೆಟ್ಟರ್, ಕೃಷ್ಣಭೈರೇಗೌಡ, ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಪರಿಹಾರ ಕೊಡಿಸುವಂತೆ ಕೋರಿದ್ದರು. ಇದಲ್ಲದೆ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿಯೂ ಮನವಿ ಮಾಡಿದ್ದರಿಂದ ಪರಿಹಾರ ಒದಗಿಸುವ ಭರವಸೆ ನೀಡಿ ರಾಹುಲ್ ಗಾಂಧಿ ಪ್ರಯಾಣದ ಖರ್ಚಿಗೆ ಹಣ ನೀಡಿ ಕಳುಹಿಸಿದ್ದರು.

ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರೈತ ವಿಭಾಗದ ಅಧ್ಯಕ್ಷ ಸಚಿನ್ ಮಿಗಾ ಅವರಿಗೆ ಈ ಸಂಬಂಧ ಸೂಚನೆ ನೀಡಿ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಿಗಾ ಅವರು ಕ್ರಮ ಕೈಗೊಂಡು ರೈತನ ನೆರವಿಗೆ ಧಾವಿಸಿದ್ದಾರೆ.

Facebook Comments

Sri Raghav

Admin