ವಿಜಯ್ ಮಲ್ಯ ರೀತಿ ನೀವೂ ಚಾಲಾಕಿ ಉದ್ಯಮಿ ಆಗಬೇಕು : ಸಚಿವರ ವಿವಾದಿತ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Malya--01

ಹೈದರಾಬಾದ್, ಜು.14- ಉದ್ಯಮಿ ವಿಜಯ್ ಮಲ್ಯ ತುಂಬಾ ಕಿಲಾಡಿ ಮನುಷ್ಯ; ನೀವು ಕೂಡ ಅವರಂತೆ ಯಶಸ್ವಿ ಉದ್ಯಮಿಗಳಾಗಲು ಸಾಕಷ್ಟು ಬ್ಯಾಂಕ್ ಸಾಲ ತೆಗೆದುಕೊಳ್ಳಬೇಕು ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಂ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಲಹೆ ನೀಡಿದ್ದಾರೆ. ಆದರೆ, ಈ ಸಲಹೆ ಈಗ ವಿವಾದವಾಗಿ ಮಾರ್ಪಟ್ಟಿದೆ.

2018ರ ರಾಷ್ಟ್ರೀಯ ಬುಡಕಟ್ಟು ಉದ್ಯಮಶೀಲರ ಚೊಚ್ಚಲ ಶೃಂಗದಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನರ ಕಲ್ಯಾಣಕ್ಕೆ ಬದ್ಧವಾಗಿರುವ ಸರಕಾರ ಬುಡಕಟ್ಟು ಉದ್ಯಮಶೀಲರನ್ನು ಪ್ರೊತ್ಸಾಹಿಸಲು ಅನೇಕಾನೇಕ ಹಣಕಾಸು ನೆರವು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು. ಯಶಸ್ವಿ ಉದ್ಯಮಿಗಳಾಗಲು ಬುಡಕಟ್ಟು ಸಮುದಾಯದ ಉದ್ಯಮಶೀಲರು ವಿಜಯ್ ಮಲ್ಯ ಅವರಂತೆ ಚುರುಕಿನ, ಚಾಲಾಕಿಯ ಉದ್ಯಮಿಯಾಗಬೇಕು ಎಂದು ಸಚಿವರು ಕರೆ ನೀಡಿದರು.

ಕಳಂಕಿತ ಉದ್ಯಮಿ, ಮದ್ಯ ದೊರೆ ವಿಜಯ್ ಮಲ್ಯ ಅವರು ಭಾರತೀಯ ಬ್ಯಾಂಕ್‍ಗಳ ಸಮೂಹಕ್ಕೆ 9,000 ಕೋಟಿ ರೂ. ಸಾಲವನ್ನು ಸುಸ್ತಿ ಇರಿಸಿ ಲಂಡನ್‍ಗೆ ಪಲಾಯನ ಮಾಡಿದ್ದು ,ಅವರ ವಿದೇಶಿ ಆಸ್ತಿಪಾಸ್ತಿಗಳ ಮುಟ್ಟುಗೋಲು ಮತ್ತು ಗಡಿಪಾರು ಪ್ರಕ್ರಿಯೆಯು ಈಗ ನಡೆಯುತ್ತಿದೆ. ವೇದಿಕೆಯಲ್ಲಿ ತಮ್ಮದೇ ಧಾಟಿಯ ಆಲೋಚನೆಗಳನ್ನು ಹರಿಬಿಟ್ಟ ಸಚಿವರು, ನಾವು ಉದ್ಯಮಿಗಳಾಗಬೇಕಾದರೆ ಬುದ್ಧಿವಂತರೂ, ಚುರುಕಿನವರೂ, ಚಾಲಾಕಿಗಳೂ ಆಗಬೇಕು; ಉದ್ಯಮ ಸಂಬಂಧಿ ಮಾಹಿತಿಗಳನ್ನು, ಜ್ಞಾನವನ್ನು ಸಂಪಾದಿಸಬೇಕು; ಏಕೆಂದರೆ ಜ್ಞಾನವೇ ನಮ್ಮ ಶಕ್ತಿ; ಯಾರಲ್ಲಿ ಮಾಹಿತಿ, ಜ್ಞಾನ ಇರುತ್ತದೆಯೋ ಅವರೇ ಅಧಿಕಾರವನ್ನು ಪ್ರಯೋಗಿಸುತ್ತಾರೆ ಎಂದು ಹೇಳಿದರು.

ನೀವೆಲ್ಲ ವಿಜಯ್ ಮಲ್ಯ ಅವರನ್ನು ಟೀಕಿಸುತ್ತೀರಿ; ಆದರೆ ವಿಜಯ್ ಮಲ್ಯ ಯಾರು ? ಒಬ್ಬ ಚಾಲಾಕಿ ಮನುಷ್ಯ. ಅವರು ಕೆಲವು ಬುದ್ಧಿವಂತ ಜನರನ್ನು ತನ್ನ ಕೈಕೆಳಗೆ ಕೆಲಸಕ್ಕಿಟ್ಟುಕೊಂಡ ಮಹಾ ಚಾಲಕಿ, ಚುರುಕಿನ ಮನುಷ್ಯ. ಆತ ಅಲ್ಲಿ, ಇಲ್ಲಿ ಎಂಬಂತೆ ಬ್ಯಾಂಕರ್‍ಳೊಂದಿಗೆ, ರಾಜಕಾರಣಿಗಳೊಂದಿಗೆ, ಸರ್ಕಾರದೊಂದಿಗೆ ಚಾಣಾಕ್ಷತೆಯಿಂದ ವ್ಯವಹರಿಸಿ ಅವರನ್ನು ಖರೀದಿಸಿದರು. ವಿಜಯ್ ಮಲ್ಯ ಅವರಂತೆ ಚಾಣಾಕ್ಷ, ಚಾಲಾಕಿ ಉದ್ಯಮಿಯಾಗುವುದಕ್ಕೆ ನಿಮ್ಮನ್ನು ಯಾರು ತಡೆದಿದ್ದಾರೆ..? ಆದಿವಾಸಿಗಳು ವ್ಯವಸ್ಥೆಯ ಮೇಲೆ, ಬ್ಯಾಂಕರ್ಗಳ ಮೇಲೆ ಪ್ರಭಾವ ಬೀರಬಾರದು ಎಂದು ಯಾರು ಹೇಳಿದ್ದಾರೆ..? ಎಂದು ಸಚಿವ ಓರಂ ತಿಳಿಸಿದರು. ಸಚಿವರ ಈ ಹೇಳಿಕೆಗೆ ಈಗ ತೀವ್ರ ಟೀಕೆ ಮತ್ತು ಖಂಡನೆಗಳು ವ್ಯಕ್ತವಾಗುತ್ತಿವೆ.

Facebook Comments

Sri Raghav

Admin