ಕುಮಾರಸ್ವಾಮಿ ಆರೋಗ್ಯ ಲೆಕ್ಕಿಸದೆ 18ಗಂಟೆ ದುಡಿಯುತ್ತಿದ್ದಾರೆ ಎಂದ ಗೌಡರು, ಕಣ್ಣೀರಿಟ್ಟ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-CM-Devegowda
ಬೆಂಗಳೂರು, ಜು.14- ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗಿನಿಂದ ಕುಮಾರಸ್ವಾಮಿ 18 ಗಂಟೆ ಕಾಲ ಕೆಲಸ ಮಾಡುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ನನಗೆ ಆತಂಕವಿದೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಾಡಿಗಾಗಿ ದುಡಿಯುತ್ತಿರುವ ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂದು ಮನವಿ ಮಾಡಿದರು. ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯಮಂತ್ರಿ, ಸಚಿವರು,ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠಿ ಎಚ್.ಡಿ.ದೇವೇಗೌಡರು, ಕೆಲವರು ಕುಮಾರಸ್ವಾಮಿ ಏಕೆ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. 18 ಗಂಟೆ ಕೆಲಸ ಮಾಡುವಾಗ ಅವರಿಗೆ ಗ್ರಾಮವಾಸ್ತವ್ಯ ಮಾಡಲು ಸಮಯವೆಲ್ಲಿ. ನಾನು ವಿಶ್ರಾಂತಿ ಪಡೆಯುವುದಿಲ್ಲ. ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದೇನೆ ಎಂದು ಹೇಳಿದರು. ಕೋಮುವಾದಿ ವ್ಯವಸ್ಥೆಯನ್ನು ಅಧಿಕಾರಕ್ಕೆ ಬಾರದಂತೆ ತಡೆಯುವುದು ನಮ್ಮೆಲ್ಲ ಕರ್ತವ್ಯ. ಕಾಂಗ್ರೆಸ್ ಜೊತೆ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಮೈತ್ರಿ ಮಾಡಿಕೊಳ್ಳಲಾಗಿದೆ. ನಮಗೆ ನಿಗಮ ಮಂಡಳಿಯಲ್ಲಿ 25ರಿಂದ 30 ಸ್ಥಾನ ಸಿಗಬಹುದು. ಸ್ಥಾನಮಾನ ಸಿಗದವರು ಬೇಸರ ಮಾಡಿಕೊಳ್ಳಬಾರದು ಎಂದು ಹೇಳಿದರು.

# ಭಾವುಕರಾದ ಕುಮಾರಸ್ವಾಮಿ:
ಇನ್ನು ಸನ್ಮಾನ ಸ್ವೀಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಂದಿನ ಕೆಲವು ಕಹಿ ಘಟನೆಗಳ ನೆನೆದು ಕಣ್ಣೀರು ಹಾಕಿದರು. ನಾನು 43 ಸಾವಿರ ಕೋಟಿ ಸಾಲ ಮನ್ನಾ ಮಾಡುವಂತ ದೃಢ ನಿರ್ಧಾರ ಕೈಗೊಂಡಿದ್ದರೂ ಕೆಲವರು ನನ್ನನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಈಗ ಸಮಾಧಾನವಾಗಿದೆ ಎಂಬುದನ್ನು ಅವರೇ ತೀರ್ಮಾನಿಸಬೇಕು. ಮೀನುಗಾರ ಮಹಿಳೆಯರು ಕುಮಾರಸ್ವಾಮಿ ಇಸ್ ನಾಟ್ ಮೈ ಸಿಎಂ ಎಂದು ಹೇಳುತ್ತಾರೆ. ಯಾವ ಪುರುಷಾರ್ಥಕ್ಕೆ ಈ ಆರೋಪ ಹೊತ್ತುಕೊಳ್ಳಲಿ ಎಂದು ಭಾವುಕರಾದರು.

# ಮೀನುಗಾರರು, ನೇಕಾರರು, ಸ್ತ್ರೀಶಕ್ತಿಸಂಘಗಳ ಸಾಲ ಮಾನ್ನಾ
ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲಿ ಮೀನುಗಾರರು, ನೇಕಾರರು, ಸ್ತ್ರೀ ಶಕ್ತಿಸಂಘಟನೆಗಳ ಸಾಲವನ್ನು ಮುಖ್ಯಮಂತ್ರಿ ಮನ್ನಾ ಮಾಡಲಿದ್ದಾರೆ. ಜನತೆ ಸ್ವಲ್ಪ ಸಮಯಾವಕಾಶ ಕೊಡಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠಿ ಎಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯಮಂತ್ರಿ, ಸಚಿವರು,ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಬೇಕಾದರೆ ಹಣಕಾಸು ಕ್ರೋಢೀಕರಣವಾಗಬೇಕು. ಅದನ್ನು ಸರಿದೂಗಿಸಲು ಸಮಯ ನೀಡುವುದಿಲ್ಲ ಎಂದು ಹೇಗೆ ಎಂದು ಪ್ರಶ್ನಿಸಿದರು. ರೈತರ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲಿ ಮೀನುಗಾರರು, ನೇಕಾರರು ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಮನ್ನ ಮಾಡಿದಾಗಲೇ ನನಗೆ ಸಮಾಧಾನವಾಗುವುದು. ರೈತರು ಸಾಲಮನ್ನಾದಲ್ಲಿ ಒಕ್ಕಲಿಗರಿಗೆ ಶೇ.30ರಷ್ಟು ಸಿಗುತ್ತದೆ ಎಂಬ ಸುದ್ದಿ ವಿರೋಧಿಗಳು ಹಬ್ಬಿಸುತ್ತಿರುವ ಕುತಂತ್ರ ಎಂದು ಟೀಕಿಸಿದರು.

ಬಿಜೆಪಿಯವರ ಆಟವನ್ನು ಗಮನಿಸುತ್ತಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವ ಕಾರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದಾರೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು.ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಠ ಆಕ್ಷೇಪಿಸಿದರು. 87ರ ವಯಸಿನಲ್ಲಿ ನಾನು ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿಲ್ಲ. ನಾಡಿನ ನೆಲಜಲ ಉಳಿಸುವುದಕ್ಕಾಗಿ ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಮಾಧ್ಯಮಗಳು, ವಿರೋಧ ಪಕ್ಷಗಳು ಸೇರಿದಂತೆ ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನಾನು ಮಾಧ್ಯಮಗಳ ಬಗ್ಗೆ ಟೀಕೆ ಮಾಡಲು ಹೋಗೊಲ್ಲ. ನಿಮ್ಮ ಕರ್ತವ್ಯವನ್ನು ನೀಡು ಮಾಡುತ್ತಿದ್ದೀರಿ. ಆದರೆ ವಾಸ್ತವಕ್ಕೆ ದೂರವಾದ ಸುದ್ದಿ ಮಾಡಿ ಗೊಂದಲ ಸೃಷ್ಟಿಸಬಾರದು ಎಂದು ಸಲಹೆ ಮಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಂತಹ ಸಂದರ್ಭದಲ್ಲಿ ಬಜೆಟ್ ಮಂಡಿಸಿದರು ಎಂಬುದು ನನಗೆ ಮಾತ್ರ ಗೊತ್ತು. ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಬಜೆಟ್ ಮಂಡಿಸದೆ ಲೇಖಾನುದಾನ ಮಾಡಲಿ ಎಂದಿದ್ದರು. ಮತ್ತೊಂದೆಡೆ ಅವರದೇ ಬಜೆಟ್‍ನ್ನು ಮುಂದುವರೆಸುವ ಸಂದಿಗ್ದ ಸ್ಥಿತಿಗೆ ಸಿಲುಕಿಸಿದ್ದರು. ಕುಮಾರಸ್ವಾಮಿ ತಾಳ್ಮೆ ಕಳೆದುಕೊಳ್ಳದೆ ಎಲ್ಲವನ್ನೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದೇವರು ಆಶೀರ್ವಾದ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ಮನವಿ ಮಾಡಿದರು. 37 ಶಾಸಕರನ್ನು ಹೊಂದಿರುವ ಅವರಿಗೆ 47 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವುದೆಂದರೆ ಹುಡುಗಾಟದ ಮಾತಲ್ಲ. ಈ ಸಾವನ್ನು ಒಂದೇ ಕಂತಿನಲ್ಲಿ ತೀರಿಸಲು ಸಾಧ್ಯವಿಲ್ಲ. 4 ಕಂತಿನಲ್ಲಿ ತೀರಿಸುವ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಇದನ್ನು ಪ್ರಶ್ನಿಸುವ ಪ್ರತಿ ಪಕ್ಷದವರು ಅರ್ಥ ಮಾಡಿಕೊಳ್ಳಲಿ ಎಂದು ದೇವೇಗೌಡರು ಛಾಟಿ ಬೀಸಿದರು.

Facebook Comments

Sri Raghav

Admin