ನಿಗದಿತ ಸಮಯದಲ್ಲೇ ನಡೆಯಲಿದೆ ಲೋಕಸಭೆ ಚುನಾವಣೆ : ಬಿಜೆಪಿ ನಾಯಕರ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Amit-shah--01
ನವದೆಹಲಿ,ಜು.14- ಅವಧಿಗೂ ಮುನ್ನವೇ ಲೋಕಸಭೆ ಚುನಾವಣೆ ನಡೆಯಲಿದೆ ಎಂಬ ವದಂತಿಯನ್ನು ತಳ್ಳಿ ಹಾಕಿರುವ ಕೇಂದ್ರ ಬಿಜೆಪಿ ನಾಯಕರು ನಿಗದಿತ ಸಮಯದಲ್ಲೇ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದೆ. ಯಾವುದೇ ಸಂದಭದಲ್ಲೂ ಲೋಕಸಭೆಯನ್ನು ವಿಸರ್ಜಿಸಿ ಅವಧಿಗೂ ಮುನ್ನವೇ ಹೊಸ ಜನಾದೇಶ ಪಡೆಯುವ ಉಮೇದು ಪ್ರಧಾನಿ ನರೇಂದ್ರ ಮೋದಿ ಅವರಿಗಿಲ್ಲ. ದೇಶದ ಜನತೆ ಐದು ವರ್ಷ ಆಡಳಿತ ನೀಡಲು ಆದೇಶ ನೀಡಿರುವಾಗ ಅವಧಿಗೂ ಮುನ್ನವೇ ಚುನಾವಣೆ ನಡೆಯಲಿದೆ ಎಂಬುದು ಕೇವಲ ಕಾಗದದ ಮೇಲಿನ ವದಂತಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ತೆಲಂಗಾಣದಲ್ಲಿ ಲೋಕಸಭೆ ಚುನಾವಣೆ ಕುರಿತಂತೆ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಿರುವ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ, ಮಿಜಾರೋಂ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮೋದಿ ಲೋಕಸಭೆಯನ್ನು ವಿಸರ್ಜಿಸಿ ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲಿದ್ದಾರೆ ಎಂಬ ವದ್ದಂತಿಗಳು ಕೇಳಿಬಂದಿದ್ದವು.

ಎಂಥದೇ ಸಂದರ್ಭದಲ್ಲೂ ಅವಧಿಗೂ ಮುನ್ನ ಲೋಕಸಭೆ ಚುನಾವಣೆ ನಡೆಯುವುದಿಲ್ಲ. ನಿಗದಿತ ಅವಧಿಯಂತೆ ಚುನಾವಣೆ ನಡೆಯಲಿದ್ದು, ಯಾವುದೇ ವದಂತಿಗಳಿಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬಾರದು. ಕೇಂದ್ರದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರವುದರಿಂದ ನಮಗೆ ಯಾವುದೇ ಆತಂಕ ಇಲ್ಲ ಎಂದು ತೆಲಂಗಾಣ ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಪ್ರೇಮೇಂದರ್ ರೆಡ್ಡಿ ಹೇಳಿದ್ದಾರೆ.
ಲೋಕಸಭೆ ವಿಸರ್ಜನೆಯಾಗುತ್ತದೆ ಎಂಬುದು ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಸುಳ್ಳು ವದಂತಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈಗಲೂ ದೇಶದಲ್ಲಿ ಅವರು ಅತ್ಯಂತ ಜನಪ್ರಿಯ ನಾಯಕರು. ನಮಗೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತಂತೆ ಕೆಲ ಮುಸ್ಲಿಂ ಸಂಘಟನೆಗಳು ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ನಾವು ಮಂದಿರ ನಿರ್ಮಾಣ ಮಾಡಲಿದ್ದೇವೆ. ಇದು ಕೋಟ್ಯಂತರ ಜನರ ಒತ್ತಾಸೆಯಾಗಿದೆ. ಲೋಕಸಭೆ ಚುಣಾವಣೆ ಮುನ್ನ ಇಲ್ಲವೇ ನಂತರ ಮಂದಿರ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‍ಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬುದಕ್ಕೆ ಇದುವರೆಗೂ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಮಾತುಕತೆ ನಡೆಸುತ್ತಾರೆ. ನಾವು ಪಕ್ಷ ಸಂಘಟನೆ ಕುರಿತಂತೆ ನಮಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ ಎಂದು ಪ್ರೇಮೇಂದರ್ ರೆಡ್ಡಿ ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಬಹುದೆಂಬ ವದಂತಿ ಕೇಳಿಬಂದಿತ್ತು. ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಷಾ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ ಎಲ್ಲ ವದಂತಿಗಳಿಗೂ ತೆರೆ ಬಿದ್ದಿದೆ.

Facebook Comments

Sri Raghav

Admin