ರಾಜ್ಯ ಸರ್ಕಾರ ಕೃಷಿಕರ ಜನರ ಹುಸಿಯಾಗಿಸಿದೆ : ಈಶ್ವರಪ್ಪ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--01
ಶಿವಮೊಗ್ಗ,ಜು.14- ರೈತರ ಸಂಪೂರ್ಣ ಸಾಲಮನ್ನಾ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರ ಕೃಷಿಕರ ನಿರೀಕ್ಷೆಯನ್ನು ಹುಸಿಯಾಗಿಸಿದೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ಪರದಾಡುತ್ತಿದೆ. ಪ್ರಸ್ತುತ ಈಗ ಸಾಲ ಮನ್ನಾ ಮಾಡಿರುವುದಕ್ಕೆ ಜನಸಾಮಾನ್ಯರ ಮೇಲೆ ಬರೆ ಎಳೆಯುವ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ ಎಂದು ದೂರಿದರು.

ವಿದ್ಯುತ್ ದರ ಏರಿಕೆ, ತೈಲ ತೆರಿಗೆ ಏರಿಕೆ ಮಾಡುವ ಮೂಲಕ ಶ್ರೀ ಸಾಮಾನ್ಯನ ಮೇಲೆ ಹೊರೆ ಹೊರೆಸಿದ್ದಾರೆ. ಸಾಲ ಮನ್ನಾದ ಹಣ ಹೊಂದಿಸಲು ಪರಿಪಾಡಲು ಪಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ, ಸಾರಿಗೆ ಸಚಿವರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇದರ ವಿರುದ್ದ ರಾಜ್ಯಾದ್ಯಂತ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.

ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಸರ್ಕಾರಕ್ಕೆ ಪತ್ರ ಬರೆಯುವ ರಾಜಕೀಯ ನಾಟಕವಾಡುತ್ತಿರುವುದನ್ನು ಮೊದಲು ನಿಲ್ಲಿಸಲಿ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಡಿತಗೊಳಿಸಿರುವ ಅನ್ನಭಾಗ್ಯದ ಎರಡು ಕೆಜಿ ಅಕ್ಕಿಯನ್ನು ಜನರಿಗೆ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರಲಿ. ವಿದ್ಯುತ್ ದರ, ಡೀಸೆಲ್, ಪೆಟ್ರೋಲ್ ಮೇಲಿನ ತೆರಿಗೆ ದರ ಇಳಿಸುವಂತೆ ಸರ್ಕಾರಕ್ಕೆ ತಿಳಿಸಲಿ ಅದನ್ನುಬಿಟ್ಟು ಪತ್ರ ಬರೆಯುವ ನಾಟಕವಾಡಬಾರದು ಎಂದು ಈಶ್ವರಪ್ಪ ಹರಿಹಾಯ್ದರು.

Facebook Comments

Sri Raghav

Admin