ಸಾಮೂಹಿಕ ನಾಯಕತ್ವದಲ್ಲಿ ತೃತೀಯ ರಂಗ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಹುಬ್ಬಳ್ಳಿ, ಜು.15- ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಮಟ್ಟಕ್ಕೆ ನಾನು ಹೋಗುವುದಿಲ್ಲ. ಲೋಕಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ಹುಬ್ಬಳ್ಳಿಯಲ್ಲಿ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಪದಗ್ರಹಣದ ವೇಳೆ ಎಲ್ಲ ನಾಯಕರು ಆಗಮಿಸಿದ್ದರು. ಆದರೆ, ತೃತೀಯ ರಂಗ ಇನ್ನೂ ಸ್ಪಷ್ಟವಾಗಿ ಹೊರಹೊಮ್ಮಿಲ್ಲ. ಒಂದೊಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಬಲ ಒಂದೊಂದು ರೀತಿ ಇದೆ. ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಾಬಲ್ಯ ಹೊಂದಿವೆ ಎಂದರು. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೆಲವು ರಾಜ್ಯಗಳಲ್ಲಿ ಹೊಂದಾಣಿಕೆ ಆಗಬಹುದು, ಚುನಾವಣೆ ನಂತರವೂ ಹೊಂದಾಣಿಕೆ ನಡೆಯಬಹುದು. ಸಾಂದರ್ಭಿಕ ನಿಲುವು ಬದಲಾವಣೆಯಾಗುತ್ತದೆ. ತಮಿಳುನಾಡಿನಲ್ಲಿ ಐದಾರು ಗುಂಪುಗಳಿವೆ. ಯಾರ ಶಕ್ತಿ ಎಷ್ಟಿದೆ ಎಂಬುದನ್ನು ಅಳತೆ ಮಾಡುವುದು ಕಷ್ಟ. ಬಿಜೆಪಿ ವಿರುದ್ಧವಾಗಿ ಕಾಂಗ್ರೆಸ್ ಜತೆ ಹೊಂದಿಕೊಂಡು ಹೋಗುವ ಪಕ್ಷಗಳ ಚಿತ್ರಣ ಸ್ಪಷ್ಟವಿಲ್ಲ ಎಂದು ಹೇಳಿದರು.

Devegowda--04

ಬೆಂಗಳೂರಿಗೆ ಆಗಮಿಸಿದ್ದ ವಿವಿಧ ಪಕ್ಷಗಳ 29 ನಾಯಕರು ಒಂದಾಗುತ್ತಾರೆ ಎಂದು ನಾನು ಹೇಳುವುದಿಲ್ಲ. ಮೈತ್ರಿ ಸರ್ಕಾರ ರಚನೆಯಾಗುವಾಗ ಒಂದೆಡೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ. ಜೆಡಿಎಸ್ ಪಕ್ಷವನ್ನು ಉಳಿಸಿಕೊಂಡು ಹೋಗುವುದು ನನ್ನ ಹೋರಾಟವಾಗಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟರು.

Devegowda--03

ಬಿಜೆಪಿ ವಿರುದ್ಧದ ನಾಯಕತ್ವ ವಹಿಸಿಕೊಳ್ಳುವ ಮಟ್ಟಕ್ಕೆ ನಾನು ಹೋಗುವುದಿಲ್ಲ. ನನಗೆ ಹಿರಿತನವಿದೆ. ಆದರೆ, ನಮ್ಮ ಪಕ್ಷದ ಶಕ್ತಿಯ ಅರಿವೂ ಕೂಡ ನಮಗಿದೆ. ರಾಹುಲ್‍ಗಾಂಧಿ ಅವರ ನಾಯಕತ್ವಕ್ಕೆ, ಪ್ರಧಾನಿ ಆಕಾಂಕ್ಷೆಗೆ ನಮ್ಮ ಕಡೆಯಿಂದ ಆತಂಕವಿಲ್ಲ ಎಂದ ಗೌಡರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಮಾಡುವುದರ ಬಗ್ಗೆ ಕಾಂಗ್ರೆಸ್ ನಿರ್ಧರಿಸುತ್ತದೆ. ನಮಗೆ ಲೋಕಸಭೆಯಲ್ಲಿ ಎಷ್ಟು ಸೀಟು ಬರುತ್ತದೆ ಎಂಬುದನ್ನು ನೋಡಬೇಕು.ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಕುರಿತು ಮೇಲ್ಮಟ್ಟದಲ್ಲಿ ಚರ್ಚೆಯಾಗಬೇಕು. ವಿಧಾನಸಭೆ ಫಲಿತಾಂಶ ನಿರಾಸೆ ತರಲು ಕಾರಣವೇನು ಎಂದು ಅವಲೋಕನ ಮಾಡುತ್ತಿದ್ದೇವೆ ಎಂದು ಹೇಳಿದರು.

Devegowda--02

ಅನ್ಯಾಯವಾಗಲು ಬಿಡುವುದಿಲ್ಲ:
ಉತ್ತರ ಕರ್ನಾಟಕಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡುವುದಿಲ್ಲ. 25 ವರ್ಷಗಳ ಕಾಲ ಲಿಂಗಾಯತರು ಈ ರಾಜ್ಯವನ್ನು ಆಳಿದ್ದಾರೆ. ಅವರು ಈ ಭಾಗಕ್ಕೆ ಏನು ಮಾಡಿದ್ದಾರೆ ಎಂಬೆಲ್ಲ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಕುಮಾರಸ್ವಾಮಿಯವರು ನಿದ್ರೆ ಮಾಡುತ್ತಿಲ್ಲ. ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕಕ್ಕೆ ನೀಡಿರುವ ಅನುದಾನ ಕುರಿತು ಚರ್ಚೆಯಾಗಲಿ ಎಂದರು.

1956ರಿಂದ ಇಂದಿನವರೆಗೆ ಯಾವ ಭಾಗಕ್ಕೆ ಎಷ್ಟು ಕೊಟ್ಟಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಿ, ಎರಡು ದಿನ ಚರ್ಚೆ ನಡೆಸುವಂತೆ ಕುಮಾರಸ್ವಾಮಿಯವರಿಗೆ ಹೇಳುತ್ತೇನೆ. ನಂಜುಂಡಪ್ಪ ವರದಿ ಮುಂದಿಟ್ಟುಕೊಂಡು ಚರ್ಚೆ ಮಾಡಲಿ. ಉತ್ತರ ಕರ್ನಾಟಕಕ್ಕೆ ಕೊಟ್ಟ ದುಡ್ಡೆಲ್ಲ ರಾಜಕಾರಣಿಗಳ ಮನೆಗೆ ಹೋಗಿದೆಯೇ ಎಂದು ದೇವೇಗೌಡರು ಗುಡುಗಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ನನ್ನ ಕಾಲದಲ್ಲಿ ಅನೇಕ ಅಭಿವೃದ್ಧಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಎಷ್ಟು ಸಚಿವ ಸ್ಥಾನ ಕೊಟ್ಟಿದ್ದರು, ಎಚ್.ಕೆ.ಪಾಟೀಲರು ಈಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಅವರು ಈ ಹಿಂದೆ ಸಚಿವರಾಗಿದ್ದಾಗ ತಮ್ಮ ಗದಗ ಜಿಲ್ಲೆಗೆ ಎಷ್ಟು ಹಣ ನೀಡಿದ್ದಾರೆ ಎಂದು ಹೇಳಲಿ. ಉತ್ತರ ಕರ್ನಾಟಕಕ್ಕೆ ಯಾವುದೇ ತಾರತಮ್ಯವಾಗಿಲ್ಲ. ಭಾಷಾವಾರು ಪ್ರಾಂತ್ಯದ ನಂತರ ಉತ್ತರ ಕರ್ನಾಟಕಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಲೆಕ್ಕ ತರಿಸುತ್ತೇನೆ ಎಂದು ಗೌಡರು ಹೇಳಿದರು.

ಮುಂಬರುವ ಲೋಕಸಭೆ,ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷ ಚುರುಕುಗೊಳಿಸಲು ಹುಬ್ಬಳ್ಳಿಗೆ ಬಂದಿದ್ದೇನೆ. ನನಗೆ ಪಕ್ಷವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಕಳೆದ ಚುನಾವಣೆಯಲ್ಲಿ 17 ಜಿಲ್ಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಸ್ಥಳೀಯ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ತಿಳಿಸಿದರು.

Facebook Comments

Sri Raghav

Admin