ಸಂವಿಧಾನದ ಪರಿಚ್ಚೇದ 117ರ ತಿದ್ದುಪಡಿಯಿಂದ ಬಡ್ತಿ ಮೀಸಲಾತಿ ಸಮಸ್ಯೆ ಇತ್ಯರ್ಥ

ಈ ಸುದ್ದಿಯನ್ನು ಶೇರ್ ಮಾಡಿ

nagamohan-das

ಬೆಂಗಳೂರು, ಜು.15- ಸಂವಿಧಾನದ ಪರಿಚ್ಚೇದ 117ರ ತಿದ್ದುಪಡಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿದರೆ ಬಡ್ತಿ ಮೀಸಲಾತಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಭಿಪ್ರಾಯಪಟ್ಟರು. ಗಾಂಧಿಭವನದಲ್ಲಿಂದು ದಲಿತ ಹಕ್ಕುಗಳ ಸಮಿತಿ ಮತ್ತು ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ದಲಿತರ ವಿರುದ್ಧ ಸುಪ್ರೀಂಕೋರ್ಟ್ ತೀರ್ಪುಗಳು, ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಭೂಮಿಯ ಪ್ರಶ್ನೆಗಳು ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ದಲಿತರಿಗೆ ಉದ್ಯೋಗ ಪ್ರವೇಶದಲ್ಲಿ ಮೀಸಲಾತಿ, ಬಡ್ತಿಯಲ್ಲಿ ಮೀಸಲಾತಿ ಹಾಗೂ ಸೌಲಭ್ಯದಲ್ಲಿ ಮೀಸಲಾತಿಯನ್ನು ಕಾತ್ರಿಪಡಿಸುವ 117ನೇ ತಿದ್ದುಪಡಿಯನ್ನು ರೀಪಿಸಿ ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಆದರೆ, ಅದು ಲೋಕಸಭೆಯಲ್ಲಿ ಮಂಡನೆಯಾಗದೇ ಇದುದ್ದರಿಂದ ಅನೂರ್ಜಿತಗೊಂಡಿದೆ. ಅದು ಈಗ ಅಂಗೀಕಾರ ಪಡೆದು ಜಾರಿಗೆ ಬಂದರೆ ಸುಪ್ರೀಂಕೋರ್ಟ್‍ನ ಹಲವಾರು ತೀರ್ಪುಗಳು ಅನೂgರ್ಜಿತಗೊಳ್ಳುತ್ತವೆ. ಬಡ್ತಿ ಮೀಡಲಾತಿಯಂತಹ ಗೊಂದಲಗಳು ಬಗೆಹರಿಯುತ್ತವೆ ಎಂದರು.

ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನಗಳಿಲ್ಲದ ವರ್ಗಗಳು ಗುಲಾಮಗಿರಿಯಲ್ಲೇ ಬದುಕಬೇಕಾಗುತ್ತದೆ. ಈ ದೇಶಕ್ಕೆ ಶ್ರಮಶಕ್ತಿಯ ಕೊಡುಗೆ ನೀಡಿದ ತಳ ಸಮುದಾಯಗಳು ಉತ್ಪಾಸನೆ ಮತ್ತು ಹಂಚಿಕೆಯಲ್ಲಿ ಪಾಲು ಪಡೆಯಲು ಸಾಧ್ಯವಾಗಿಲ್ಲ. ಜಾತಿ ವ್ಯವಸ್ಥೆಯನ್ನು ಯಥಾವತ್ತಾಗಿ ಕಾಯ್ದುಕೊಂಡು ಬರಲಾಗುತ್ತಿದೆ. ಸಾಮಾಜಿಕ ನ್ಯಾಯ ಎಂಬುದು ಭಿಕ್ಷೆಯಂತಾಗಿದೆ ಎಂದು ತಿಳಿಸಿದರು. ಇಂದಿರಾ ಸಹಾನಿ ಮತ್ತು ಎಂ.ನಾಗರಾಜ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳಿಗೆ ವ್ಯತಿರಿಕ್ತವಾಗಿ ಇತ್ತೀಚೆಗೆ ಬಡ್ತಿ ಮೀಸಲಾತಿಯ ತೀರ್ಪು ಬಂದಿದೆ. ಇದನ್ನು ಸರಿಪಡಿಸಬೇಕಾದರೆ ಸಂವಿಧಾನ ತಿದ್ದುಪಡಿಯಾಗಲೇಬೇಕು. ಹಾಗಾಗಿ ಎಲ್ಲಾ ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ತಾವು ಬರೆದಿರುವ ಪತ್ರವನ್ನು ಸಂಘಟಕರಿಗೆ ಹಸ್ತಾಂತರಿಸಿ ಸಂಸದರಿಗೆ ರವಾನಿಸುವಂತೆ ಸಲಹೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅವರು, ಮೀಸಲಾತಿಯ ಬಗ್ಗೆ ಸಾಕಷ್ಟು ಜನರಲ್ಲಿ ಅಸಹನೆಗಳಿವೆ. ಮೀಸಲಾತಿ ಎಷ್ಟರಮಟ್ಟಿಗೆ ಶ್ರಮಿಸಿದೆ, ಅದರಿಂದ ಆಗಿರುವ ಪರಿಣಾಮಗಳೇನು ಎಂಬುದನ್ನು ಈವರೆಗೂ ಯಾವ ಸರ್ಕಾರಗಳು ಅಧ್ಯಯನ ನಡೆಸಿಲ್ಲ. ಖಾಸಗಿ ಸಂಸ್ಥೆಗಳು ನಡೆಸಿದ ಅಧ್ಯಯನ ಪ್ರಕಾರ ಮೀಸಲಾತಿ ಶೋಷಿತ ವರ್ಗಗಳಿಗೆ ತಲುಪಿಲ್ಲ. ಅದರಿಂದ ಅವರ ಅಭಿವೃದ್ಧಿಯಾಗಿಲ್ಲ ಎಂಬ ಮಾಹಿತಿ ಇದೆ ಎಂದರು. ಮೀಸಲಾತಿ ತಲುಪಿಸಬೇಕಾದವರೇ ವ್ಯವಸ್ಥಿತವಾದ ಹುನ್ನಾರ ನಡೆಸಿ ವಂಚನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಬಡ್ತಿ ಮೀಸಲಾತಿ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ತಪ್ಪಾಗಿದೆ. ಅದಕ್ಕೆ ಮೂಲ ಕಾರಣ ನ್ಯಾಯಾಂಗ ವ್ಯವಸ್ಥೆಯಲ್ಲಿ ಮನುವಾದಿ ಮಸ್ಥಿತಿ ಕೆಲಸ ಮಾಡುತ್ತಿರುವುದು. ದಲಿತರು ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚು ಪ್ರವೇಶ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಬಡ್ತಿ ಮೀಸಲಾತಿಯನ್ನು ರದ್ದುಗೊಳಿಸಿರುವ ನ್ಯಾಯಾಧೀಶರು ತಮ್ಮ ತೀರ್ಪಿಗೆ ತಕ್ಕ ಸ್ಪಷ್ಟನೆ ನೀಡಬೇಕು. ಇಲ್ಲದೇ ಹೋದರೆ ಜಾತಿವಾದಿ ಮನಸ್ಥಿತಿಯಿಂದ ತೀರ್ಪು ನೀಡಿದ್ದಾರೆ ಎಂದು ನಂಬಬೇಕಾಗುತ್ತದೆ ಎಂದು ಹೇಳಿದರು. ಸಂಸತ್‍ನಲ್ಲಿ ನಡೆಯುತ್ತಿರುವ ಚರ್ಚೆಗಳು ಅನಗತ್ಯವಾದ ವಿಷಯಗಳನ್ನು ಆಧರಿಸಿವೆ. ಯಾವ ಆಹಾರ ತಿನ್ನಬೇಕು, ಯಾವ ದೇವರನ್ನು ಪೂಜಿಸಬೇಕು ಎಂಬ ಚರ್ಚೆಗಳೇ ಹೆಚ್ಚಾಗಿವೆ. 30 ಗಂಟೆಯ ಸಂಸತ್ ಅಧಿವೇಶನದಲ್ಲಿ ಚರ್ಚೆಯಾದರೆ ಅದರಲ್ಲಿ 22 ಗಂಟೆ ರಾಮಮಂದಿರ ನಿರ್ಮಾಣ ಮಾಡಬೇಕೇ, ಬೇಡವೇ ಎಂಬ ಕುರಿತು ಚರ್ಚೆ ನಡೆದಿದೆ. ಊಟವಿಲ್ಲದೆ ಸಾಯುತ್ತಿರುವವ ಬಗ್ಗೆ ಮಾತನಾಡದೆ ಯಾವ ಆಹಾರ ತಿನ್ನಬೇಕು ಎಂಬುದನ್ನೇ ಸಂಸತ್‍ನಲ್ಲಿ ಚರ್ಚಿಸುತ್ತಿರುವುದು ವಿಪರ್ಯಾಸ.

ಸಾಮಾಜಿಕ ವಲಯದಲ್ಲೂ ಕೂಡ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎಷ್ಟು ಜನ ಭಾರತೀಯರು ಸೇರ್ಪಡೆಯಾದರು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಎಷ್ಟು ಜನ ಬಡವರು ಅಸಿವಿನಿಂದ ಇದ್ದಾರೆ ಎಂಬ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಸ್ಸಿ-ಎಸ್ಟಿ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಶಿವಶಂಕರ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ, ಎನ್.ರಾಜಣ್ಣ, ದಲಿತ ಶೋಷಣ ಮುಕ್ತಿಮಂಚ್‍ನ ರಾಷ್ಟ್ರೀಯ ಸದಸ್ಯ ನಾಗರಾಜ್ ನಂಜುಂಡಯ್ಯ ಮತ್ತಿತರರು ಭಾಗವಹಿಸಿದ್ದರು.

Facebook Comments