ಬಿಬಿಎಂಪಿ ಬೇಜವಾಬ್ದಾರಿಗೆ ಕೊನೆ ಇಲ್ಲವೇ…? ಜನರ ಹಿಡಿಶಾಪ

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು,ಜು.16- ಬಿಬಿಎಂಪಿಯ ಬೇಜವಾಬ್ದಾರಿಗೆ ಕೊನೆ ಇಲ್ಲವೇ. ಒಂದಲ್ಲ ಎರಡಲ್ಲ. ಸಾಲು ಸಾಲು ಸಮಸ್ಯೆಗಳ ನಡುವೆಯೇ ಬದುಕುತ್ತಿರುವ ಬೆಂಗಳೂರಿನ ನಾಗರಿಕರು ಮಾತ್ರ ಇದರ ಕಾರ್ಯಗಳ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಲೇ ಇರುತ್ತಾರೆ.  ಬೆಂಗಳೂರಿನಂತಹ ನಗರದಲ್ಲಿ ರಸ್ತೆಗಳ ಅವ್ಯವಸ್ಥೆಗಳು ಜನರನ್ನು ಸಾಕಷ್ಟು ಕಂಗೆಡಿಸಿವೆ. ಇದರೊಟ್ಟಿಗೆ ರಾಜಕಾಲುವೆಗಳ ತಡೆಗೋಡೆ ಇಲ್ಲದಿರುವುದು, ರಾಜಕಾಲುವೆ ಬಳಿ ನಿರ್ಮಾಣವಾಗಿರುವ ಪ್ರಪಾತ, ರಸ್ತೆಗಳ ದುರಾವಸ್ಥೆಯಂತಹ ಸಮಸ್ಯೆಗಳಿಗೆ ಕೊನೆ ಇಲ್ಲದಂತಾಗಿದೆ.  ಮಾಗಡಿ ಮುಖ್ಯರಸ್ತೆಯ ಕೊಟ್ಟಿಗೆಪಾಳ್ಯ ಸಿಗ್ನಲ್ ಬಳಿಯ ಒಕ್ಕಲಿಗರ ಸಂಘದ ಶಾಲೆಯ ತಿರುವಿನಲ್ಲಿನ ರಾಜಕಾಲುವೆ ಬಳಿ ಮಳೆಯ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿ ಆಳುದ್ದದ ಕಂದಕ ಸೃಷ್ಟಿಯಾಗಿದೆ.  ಇದರಿಂದಾಗಿ ಪಾದಚಾರಿ ಮಾರ್ಗ ಹಾಗೂ ರಸ್ತೆಯ ಬಹುಪಾಲು ರಾಜಕಾಲುವೆಯ ಪಾಲಾಗಿದೆ. ಹಾಗಾಗಿ ಜನ ಈ ಮಾರ್ಗದಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ಇತ್ತೀಚೆಗಷ್ಟೇ ರಸ್ತೆ ದಾಟುವಾಗ ಉಪನ್ಯಾಸಕರೊಬ್ಬರು ಅಪಘಾತಕ್ಕೀಡಾಗಿ ದಾರುಣವಾಗಿ ಸಾವನ್ನಪ್ಪಿದ್ದರು. ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ. ಹಾಗಿದ್ದರೂ ಬಿಬಿಎಂಪಿ ಮಾತ್ರ ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಕಳೆದ ವರ್ಷ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಇಲ್ಲಿನ ಫುಟ್ಬಾತ್ ಮತ್ತು ರಾಜಕಾಲುವೆ ಕುಸಿದು ಇರುವ ರಸ್ತೆಯಲ್ಲೇ ಅರ್ಧ ರಸ್ತೆ ಮಾತ್ರ ಉಳಿದಿದೆ. ಇದರಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಪಾತದ ಸ್ಥಳ ಒಕ್ಕಲಿಗರ ಸಂಘದ ಶಾಲಾ ಕಾಲೇಜು ಪ್ರವೇಶ ದ್ವಾರಕ್ಕೆ ಹೊಂದಿಕೊಂಡಂತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಈ ಮಾರ್ಗವಾಗಿ ನಡೆದುಹೋಗಬೇಕಾಗುತ್ತದೆ. ಆದರೆ ನಾವೆಲ್ಲರೂ ಪ್ರಾಣ ಭೀತಿಯಿಂದಲೇ ರಸ್ತೆ ದಾಟುವ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿನಿ ಪೂರ್ಣಿಮ ಹೇಳಿಕೊಂಡಿದ್ದಾರೆ. ಇದಲ್ಲದೆ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಸೇರಿದ ಜ್ಞಾನಭಾರತಿ ವಾರ್ಡ್ ವ್ಯಾಪ್ತಿಯ ಕೆಂಗೇರಿ ಹೊರ ವರ್ತುಲ ರಸ್ತೆಯಿಂದ ಸುಂಕದ ಕಟ್ಟೆ-ಮಾಗಡಿ-ಜಾಲಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಇದನ್ನು ಸರಿಪಡಿಸಲು ಮುಂದಾಗುತ್ತಿಲ್ಲ.

ವಿಪರೀತ ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಂದಕಕ್ಕೆ ಉರುಳುವ ಸಾಧ್ಯತೆಯೇ ಹೆಚ್ಚು. ಇದೇ ರಸ್ತೆಯಲ್ಲಿ ಬಿಎಂಟಿಸಿ ಬಸ್‍ಗಳು ಸಂಚರಿಸುವುದರಿಂದ ವಾಹನಗಳ ಭಾರಕ್ಕೆ ರಸ್ತೆ ಕುಸಿದು ಸಾವುನೋವು ಸಂಭವಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಹಾಗಿದ್ದರೂ ಇಲ್ಲಿ ಮಾತ್ರ ಕನಿಷ್ಟ ಸೂಚನಾ ಫಲಕವನ್ನು ಹಾಕಿಲ್ಲ ಎಂದು ಸ್ಥಳೀಯ ನಾಗರಿಕರು ಕಿಡಿಕಾರಿದ್ದಾರೆ.  ಇಷ್ಟೆಲ್ಲ ಅವಾಂತರಗಳಿರುವ ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳನ್ನು ಕೇಳಿದರೆ ಇದು ಮೇಜರ್ ರಸ್ತೆ ವಿಭಾಗಕ್ಕೆ ಬರುತ್ತದೆ ಎನ್ನುತ್ತಾರೆ. ಅವರನ್ನು ಕೇಳಿದರೆ ರಾಜಕಾಲುವೆ ವಿಭಾಗಕ್ಕೆ ಸಮಸ್ಯೆ ಸೇರುತ್ತದೆ ಎಂದು ಹೇಳಿದ್ದರು. ಹಾಗಾಗಿ ಆ ವಿಭಾಗದವರಿಗೆ ಪ್ರಶ್ನಿಸಿದರೆ ಅವರು ನಮಗೆ ಸರ್ಕಾರದಿಂದ ಕಾರ್ಯಾದೇಶ ಬರಬೇಕು. ಇಲ್ಲದಿದ್ದರೆ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.

ಸಾವಿರಾರು ಮಂದಿ ಸಾರ್ವಜನಿಕರು ನಿತ್ಯ ಸಂಚಾರ ಮಾಡುವ ರಸ್ತೆಗಳ ಅವ್ಯವಸ್ಥೆಯಿಂದಾಗಿ ಯಾರಾದರೂ ಪ್ರಾಣ ತೆತ್ತರೆ ಹೊಣೆ ಯಾರು ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಅವ್ಯವಸ್ಥೆಯ ಗೂಡಾಗಿರುವ ರಸ್ತೆಯಲ್ಲಿ ಭಾರೀ ಅವಘಡ ಸಂಭವಿಸಿ ಜನ ತೊಂದರೆಗೀಡಾಗುವ ಮೊದಲೇ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ದುರಸ್ತಿ ಕಾರ್ಯ ಕೈಗೊಳ್ಳುವರೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin