ಮೈತ್ರಿಯಲ್ಲಿ ‘ವಿಷಕಂಠ’ದಿಂದ ಹೊರಬಂತು ‘ಕಣ್ಣೀರ’ ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Cry
ಬೆಂಗಳೂರು, ಜು.16- ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಭೆಯೊಂದರಲ್ಲಿ ಕಣ್ಣೀರು ಹಾಕಿ, ವಿಷಕಂಠ ಎಂಬ ಹೇಳಿಕೆ ನೀಡಿರುವ ವಿಷಯ ಕಾಂಗ್ರೆಸ್‍ನ ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದವರು ಕುಮಾರಸ್ವಾಮಿ ಅವರ ಈ ನಡೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದು, ವಿಷ ಕೊಡುತ್ತಿದ್ದಾರೆ ಎಂದು ಹೇಳಿರುವುದು ಪರೋಕ್ಷವಾಗಿ ನಮ್ಮ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ತಪ್ಪು ಸಂದೇಶ ಹೋಗುವುದನ್ನು ತಪ್ಪಿಸಬೇಕಾಗುತ್ತದೆ. ಆಡಳಿತದ ಭಾಗವಾಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಈ ಸಂಬಂಧ ಅವರೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ ಇಂತಹ ಯಾವುದೇ ಪ್ರಯತ್ನಗಳು ನಡೆಯದಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಅವರು ತಮ್ಮ ಆಪ್ತರೊಂದಿಗೆ ಬೇಸರ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಒಂದೇ ಕಾರಣದಿಂದ ಜೆಡಿಎಸ್ ಜತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಲಾಗಿದೆ. ಅಲ್ಲದೆ, ಹೊಂದಾಣಿಕೆ ಮಾಡಿಕೊಂಡು ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ನಮ್ಮಲ್ಲೇ ಕಿತ್ತಾಟಗಳು ನಡೆದರೆ ಜನರು ನಂಬುತ್ತಾರೆಯೇ ? ಪಕ್ಷಗಳು ಬೇರೆ ಬೇರೆಯಾಗಿದ್ದರೂ ಸರ್ಕಾರ ಒಂದೇಯಾಗಿದೆ. ಸಮನ್ವಯ ಸಮಿತಿಯಲ್ಲಿ ಇಂತಹ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಇದೇ ಪರಿಸ್ಥಿತಿ ಮುಂದುವರೆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಾವು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಕುಮಾರಸ್ವಾಮಿಯವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಮೈತ್ರಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.

ಈ ಬಗ್ಗೆ ಅವರ ಜತೆಯಲ್ಲಿರುವವರು ಅವರಿಗೆ ಸಲಹೆ ನೀಡಬೇಕು. ಸಂಪುಟ ಸಭೆಯಲ್ಲಾದರೂ ಚರ್ಚಿಸಿ ನಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮಗೆ ತೊಂದರೆಯಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಮೈತ್ರಿ ಪಕ್ಷದ ಯಾವುದೇ ನಾಯಕರಾಗಲಿ ಬಹಿರಂಗ ಹೇಳಿಕೆಗಳನ್ನು ನೀಡುವುದು. ಪರೋಕ್ಷವಾಗಿ ತಪ್ಪು ಸಂದೇಶ ಹೋಗುವಂತಹ ಹೇಳಿಕೆಗಳನ್ನು ಕೊಡುವುದನ್ನು ಕೈ ಬಿಡಬೇಕು. ಸದ್ಯದಲ್ಲೇ ಎದುರಾಗಲಿರುವ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾಗಿರುವುದು ನಮ್ಮ ಗುರಿಯಾಗಿದೆ. ಅದರ ಬಗ್ಗೆ ಎಲ್ಲರೂ ಒಟ್ಟಾಗಿ ಗಮನ ಹರಿಸಬೇಕು. ಇದೇ ರೀತಿ ಹೇಳಿಕೆ, ಪ್ರತಿ ಹೇಳಿಕೆಗಳನ್ನು ಕೊಡುತ್ತಿದ್ದರೆ ಕಷ್ಟ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin