ಬೆಳ್ಳಂಬೆಳಗ್ಗೆ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 5 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ತುಮಕೂರು/ಕೋಲಾರ, ಜು.17- ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ದಂಪತಿ ಸೇರಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಹನುಮಂತಯ್ಯ (36) ಮತ್ತು ರಾಧಾ (30) ದಂಪತಿ ಹಾಗೂ ಕಾರು ಚಾಲಕ ಲೋಕೇಶ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕೆಲಸದ ನಿಮಿತ್ತ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದಿಂದಾಗಿ ಚಿತ್ರದುರ್ಗ- ಬೆಂಗಳೂರು ಮಾರ್ಗದಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.  ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಶಿರಾ ಗ್ರಾಮಾಂತರ ವೃತ್ತ ನಿರೀಕ್ಷಕ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶವ ತೆಗೆಯಲು ಹರಸಾಹಸ :
ಅಪಘಾತದ ತೀವ್ರತೆಗೆ ಮೂವರ ಶವಗಳು ಲಾರಿಯ ಕ್ಯಾಬಿನ್‍ನೊಳಗೆ ಸಿಕ್ಕಿಹಾಕಿತ್ತು. ಅವುಗಳನ್ನು ಹೊರತೆಗೆಯಲು ಪೊಲೀಸರು ಮತ್ತು ಸಾರ್ವಜನಿಕರು ಹರಸಾಹಸ ಪಟ್ಟರು. ರಸ್ತೆಗೆ ಅಡ್ಡಲಾಗಿದ್ದ ವಾಹನಗಳನ್ನು ಪೊಲೀಸರು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಸ್ಥಳಕ್ಕೆ ಡಿ.ವೈ.ಎಸ್.ಪಿ. ವೆಂಕಟ್ ನಾಯ್ಡು, ವೃತ್ತ ನಿರೀಕ್ಷಕ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಠಿಣ ಕ್ರಮಕ್ಕೆ ಒತ್ತಾಯ :
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಇಲ್ಲಿ ಆಗಾಗ ಇಂತಹ ಅಪಘಾತಗಳು ಸಂಭವಿಸಿರುತ್ತಿರುತ್ತವೆ. ಆದ್ದರಿಂದ ಪೊಲೀಸರು ಇಂತಹ ವಾಹನ ಚಾಲಕರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಇಬ್ಬರು ಸಾವು :
ಕೋಲಾರದಲ್ಲಿ ನಡೆದ ಮತ್ತೊಂದು ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್‍ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಬೆಂಗಳೂರಿನ ಇಸ್ರೋ ಬಡಾವಣೆ ನಿವಾಸಿಗಳಾದ ಶಿವು (23), ಕಿರಣ (24) ಮೃತಪಟ್ಟವರು. ಇವರು ತಮ್ಮ ಸ್ನೇಹಿತರೊಂದಿಗೆ ತಿರುಪತಿಗೆ ಹೋಗುತ್ತಿದ್ದಾಗ ಮುಳಬಾಗಿಲಿನ ಕಾಂತರಾಜು ವೃತ್ತದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಳಗ್ಗಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Facebook Comments

Sri Raghav

Admin