“ನಾಳೆಯೊಳಗೆ ಉತ್ತರ ಕೊಡಿ, ಇಲ್ಲದಿದ್ದರೆ ಕಾದಿದೆ ನಿಮಗೆ” : ಮೇಯರ್ ಘರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

Meyor--01

ಬೆಂಗಳೂರು, ಜು.17-ಪೌರ ಕಾರ್ಮಿಕ ಸುಬ್ರಹ್ಮಣ್ಯ ಸಾವಿಗೆ ಕಾರಣ ಯಾರು..? ಪೌರ ಕಾರ್ಮಿಕರಿಗೆ ವೇತನ ಏಕೆ ವಿಳಂಬವಾಗುತ್ತಿದೆ..? ನಿಮ್ಮ ವಲಯಗಳಲ್ಲಿ ಪೌರ ಕಾರ್ಮಿಕರು ಎಷ್ಟು ಮಂದಿ ಇದ್ದಾರೆ..? ಇದೆಲ್ಲದರ ಬಗ್ಗೆ ನಾಳೆಯೊಳಗೆ ತಕ್ಕ ಉತ್ತರ ನೀಡಬೇಕು. ಇಲ್ಲದಿದ್ದರೆ ಕಾದಿದೆ ನಿಮಗೆ ತಕ್ಕ ಶಾಸ್ತಿ…
ಹೀಗೆಂದು ಗುಡುಗಿದವರು ಮೇಯರ್ ಸಂಪತ್‍ರಾಜ್… ಪೌರ ಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಸೇರಿದಂತೆ ಮತ್ತಿತರ ಸದಸ್ಯರೊಂದಿಗೆ ಮೇಯರ್ ಮಲ್ಲೇಶ್ವರಂನಲ್ಲಿರುವ ಪಶ್ಚಿಮ ವಲಯದ ಬಿಬಿಎಂಪಿ ಕಚೇರಿಯಲ್ಲಿ ದಿಢೀರ್ ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಂಪತ್‍ರಾಜ್ ಅವರು ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಹೋದಂತೆ ಪಶ್ಚಿಮ ವಲಯದ ಅಧಿಕಾರಿಗಳು ಉತ್ತರ ಕೊಡಲಾಗದೆ ತಡಬಡಾಯಿಸಿದರು. ಎಷ್ಟು ತಿಂಗಳಿಂದ ಪೌರ ಕಾರ್ಮಿಕರಿಗೆ ವೇತನ ಕೊಟ್ಟಿಲ್ಲ, ನಿಮ್ಮ ವಲಯಗಳಲ್ಲಿ ಎಷ್ಟು ಮಂದಿ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಬ್ರಹ್ಮಣ್ಯ ಸಾವಿಗೆ ಯಾರು ಕಾರಣ ಎಂದು ಪಶ್ಚಿಮ ವಲಯ ಎಸ್‍ಇ ನಾಗರಾಜ್ ಅವರನ್ನು ಪ್ರಶ್ನಿಸಿದಾಗ ಅವರು ಉತ್ತರ ಕೊಡಲಾಗದೆ ತಡಬಡಾಯಿಸಿದಾಗ ನೀರು ತಂದುಕೊಡುವಂತೆ ಸಿಬ್ಬಂದಿಗೆ ಹೇಳಿದರು. ನೀರು ಕುಡಿದ ನಂತರ ನಾಗರಾಜ್, ಉತ್ತರ ನೀಡುತ್ತಿದ್ದಾಗ ನಾಳೆ ಸಂಜೆಯೊಳಗೆ ಇಂಚಿಂಚೂ ಮಾಹಿತಿ ನೀಡಬೇಕೆಂದು ಮೇಯರ್ ತಾಕೀತು ಮಾಡಿದರು.

ಸುಬ್ರಹ್ಮಣ್ಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅವರಿಗೆ ಬ್ಯಾಂಕ್ ಅಕೌಂಟ್ ಮಾಡಿಕೊಟ್ಟಿಲ್ಲ. ಅಕೌಂಟ್ ಮಾಡಿಕೊಡಲು ಡಿಸಿಎಂ, ಮೇಯರ್ರೇ ಹೋಗಬೇಕಾ..? ನೀವು ಮಾಡಿರುವ ತಪ್ಪನ್ನು ನೀವೇ ಸರಿಮಾಡ್ರಿ ಎಂದು ಗರಂ ಆಗಿ ಸಂಪತ್‍ರಾಜ್ ಹೇಳಿದರು. ಮಾಧ್ಯಮದ ಮೂಲಕ ಮನೆ ಕೊಡುವ ಭರವಸೆ ನೀಡಿದ್ದೇವೆ. ಸ್ಲಂಬೋರ್ಡ್‍ನಿಂದ ಅಪ್ಲಿಕೇಷನ್ ತಂದು ಭರ್ತಿ ಮಾಡಿ. ಮೃತ ಸುಬ್ರಹ್ಮಣ್ಯ ಕುಟುಂಬಕ್ಕೆ ಶೀಘ್ರ ಮನೆ ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಪ್ಲಿಕೇಷನ್ ಹಾಕುವಾಗ ಉಪಮುಖ್ಯಮಂತ್ರಿಗಳ ಸಹಿ ಪಡೆಯುವಂತೆ ಸಲಹೆ ನೀಡಿದರಲ್ಲದೆ, ಅಪ್ಲಿಕೇಷನ್ ಹಾಕಲು ಬೇಕಾದ ಹಣವನ್ನು ನಾನೇ ಕೊಡುತ್ತೇನೆ ಎಂದರಲ್ಲದೆ, ಅವರಿಗೆ ಕೊಡಬೇಕಾದ ಆರು ತಿಂಗಳ ವೇತನವನ್ನು ಖುದ್ದಾಗಿ ನೀವೇ ಅವರ ಮನೆಗೆ ತಲುಪಿಸಿ ಎಂದು ಖಡಕ್ ಆಗಿ ಹೇಳಿದರು.  ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಒಟ್ಟು 44 ವಾರ್ಡ್‍ಗಳಿವೆ. ಆ ಪೈಕಿ ಸುಬ್ರಹ್ಮಣ್ಯ ಸಾವನ್ನಪ್ಪಿದ ದತ್ತಾತ್ರೇಯ ವಾರ್ಡ್ ಸೇರಿದಂತೆ 9 ವಾರ್ಡ್‍ಗಳಲ್ಲಿ ಹೆಚ್ಚುವರಿ ಪೌರ ಕಾರ್ಮಿಕರಿಗೆ ಜನವರಿಯಿಂದ ವೇತನ ಆಗಿಲ್ಲ ಎಂದು ಸೂಪರಿಡೆಂಟ್ ಎಂಜಿನಿಯರ್ ಸುರೇಶ್ ಸಭೆಯಲ್ಲಿ ಮಾಹಿತಿ ನೀಡಿದರು.  ಇದೇ ವೇಳೆ ಘನತ್ಯಾಜ್ಯ ನಿರ್ವಹಣೆ ಬಗ್ಗೆಯೂ ಮೇಯರ್ ಸಂಪತ್‍ರಾಜ್ ಮಾಹಿತಿ ನೀಡುವಂತೆ ಸೂಚಿಸಿದರು.

Facebook Comments

Sri Raghav

Admin